ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ನೈವೇದ್ಯ ಪೂಜೆ ನೆರವೇರಿಸಲಾಯಿತು. ದೇವಾಲಯದಲ್ಲಿ ವೇ. ಕೃಷ್ಣ ಭಟ್ಟ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಾಲಯದ ಮೇಲುಸ್ತುವಾರಿ ಸಮಿತಿ ಸದಸ್ಯರು, ಉಪಾಧಿವಂತ ಮಂಡಳದ ಸದಸ್ಯರು, ಮಂದಿರದ ಸಿಬ್ಬಂದಿ ಉಪಸ್ಥಿತರಿದ್ದರು.
ಸಾಂಘಿಕವಾಗಿ ನಡೆದ ಶುಭಕೃತ ಸಂವತ್ಸರದ ದೇವಾಲಯದ ಮೊದಲ ಉತ್ಸವ ‘ದಧಿ ಶಿಕ್ಯೋತ್ಸವ’
ಶುಕ್ರವಾರ ಸಂಜೆ ನೆರವೇರಿತು. ಬಿರುದು ಬಾವಲಿ, ಪಕ್ಕೆ-ಪರಾಕು ಸಮೇತ ವಾದ್ಯಗಳೊಂದಿಗೆ ಕೃಷ್ಣಾಪುರ ದೇವಾಲಯಕ್ಕೆ ತೆರಳಿ, ಅಲ್ಲಿ ನಿಗದಿತ ಸ್ಥಳದಲ್ಲಿ 25 ಮೊಸರು ಗಡಿಗೆ ಹಾಗೂ ತೆಂಗಿನ ಕಾಯಿ ಒಡೆಯುವುದು ಈ ಉತ್ಸವದ ವಿಶೇಷ. ಅದರಂತೆ ಉತ್ಸವವು ಧಾರ್ಮಿಕ ಕೈಂಕರ್ಯ ಗಳೊಂದಿಗೆ ಸಂಪನ್ನಗೊಂಡಿತು. ಈ ಉತ್ಸವಕ್ಕೆ ‘ದಧಿ ಶಿಕ್ಯೋತ್ಸವ’ ಎಂದು ಕರೆಯಲಾಗುತ್ತದೆ.
ನಂತರ ಕೋಟಿತೀರ್ಥವನ್ನು ಸುತ್ತುವರಿದು ಕೃಷ್ಣಾಪುರ ದೇವಾಲಯ ಹಾಗೂ ವೆಂಕಟರಮಣ ದೇವಾಲಯಗಳ ಮೂಲಕ ಶ್ರೀ ದೇವರ ಉತ್ಸವವು ಮರಳಿ ಬಂದಿತು. ಇದು ದೇವಾಲಯದ ಪ್ರಥಮ ಉತ್ಸವವಾಗಿದ್ದು ಭಗವಾನ್ ಶ್ರೀಕೃಷ್ಣ ಮುಂದಿನ ದಿನಗಳಲ್ಲಿ ಸುಭಿಕ್ಷೆ, ಸುಖಶಾಂತಿ ನೆಲೆಸಿ ಸಮಸ್ತ ಲೋಕಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲಾಯಿತು.