ತುಮಕೂರು : ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಪಾವಗಡ ತಾಲೂಕು ಮತ್ತು ಪಟ್ಟಣ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಯೋಜನೆಯು ಸುಮಾರು 17.50 ಲಕ್ಷ ಜನರ ಆರೋಗ್ಯವನ್ನು ಕಾಪಾಡುವ ಉತ್ತಮ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ನಿನ್ನೆ (ಸೋಮವಾರ) ತುಮಕೂರಿನ ಪಾವಗಡದಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಪಾವಗಡ ತಾಲೂಕು ಮತ್ತು ಪಟ್ಟಣ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಯ ಉದ್ಘಾಟನೆ ಮತ್ತು 2250 ಮೆಗಾವ್ಯಾಟ್ ಸೋಲಾರ್ ಪ್ಲಾಂಟ್ ನಿರ್ಮಾಣದ ಘೋಷಣೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ನಂತರ ಸರ್ಕಾರಿ ಇಲಾಖೆಗಳ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಫ್ಲೋರೈಡ್ಯುಕ್ತ ನೀರಿನಿಂದ ಮುಕ್ತಿ: ಪಾವಗಡ ಮತ್ತಿತರ ಐದು ತಾಲೂಕುಗಳಿಗೆ ಅನುಕೂಲ ಕಲ್ಪಿಸುವ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ಇಲ್ಲಿನ ಜನರು ಫ್ಲೋರೈಡ್ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಇಲ್ಲಿನ ಜನರು ಆರೋಗ್ಯದ ತೊಂದರೆಗಳಿಗೆ ಒಳಗಾಗುತ್ತಿದ್ದರು. ಈ ಸಮಸ್ಯೆಯಿಂದ ಜನರನ್ನು ಮುಕ್ತಗೊಳಿಸಲು, ಸುಮಾರು 200 ಕಿ. ಮೀ. ನಷ್ಟು ದೂರವಿರುವ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಪಾವಗಡಕ್ಕೆ ತರುವ ಯೋಜನೆಗೆ ಚಾಲನೆ ನೀಡಲಾಗಿದೆ. ಹಿಂದಿನ ಅವಧಿಯಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದಿದ್ದರೆ, ಈ ಯೋಜನೆಯನ್ನು ಮೂರು ವರ್ಷಗಳ ಮುಂಚೆಯೇ ಪೂರ್ಣಗೊಳಿಸಬಹುದಾಗಿತ್ತು ಎಂದು ಸಿಎಂ ಹೇಳಿದರು.
2050ರ ವರೆಗೆ ಈ ಯೋಜನೆಯ ಲಾಭವನ್ನು ಜನರು ಪಡೆಯಬಹುದಾಗಿದೆ. ಈ ಯೋಜನೆಯಿಂದ ಸುಮಾರು 17.50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿದಂತಾಗುತ್ತದೆ. ಶುದ್ಧ ಕುಡಿಯುವ ನೀರಿನ ಯೋಜನೆಯಿಂದ ಜನರು ಅಂಗವೈಕಲ್ಯತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಪಾವಗಡ ತಾಲೂಕುಗಳ 270 ಹಳ್ಳಿಗಳಿಗೆ ಮತ್ತು ಪಾವಗಡ ಪಟ್ಟಣಕ್ಕೆ ಈ ಯೋಜನೆಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಈ ಯೋಜನೆಗೆ ಹಗಲಿರುಳು ದುಡಿದ ಸಚಿವರು ಹಾಗೂ ಶಾಸಕರ ಪ್ರಯತ್ನಗಳು ಇಂದು ಫಲಿಸಿವೆ.
ಈ ಯೋಜನೆಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸುವ ಸುಯೋಗ ನನಗೆ ದೊರೆತಿರುವುದು ಸಂತೋಷ ತಂದಿದೆ ಎಂದರು.
ಸುಳ್ಳು ಪ್ರಚಾರದಲ್ಲಿ ತೊಡಗಿರುವ ಬಿಜೆಪಿ: ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಅಪವಾದಗಳನ್ನು ಮಾಡುವ ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ? ಜನರನ್ನು ತಪ್ಪುದಾರಿಗೆ ಎಳೆಯುವಂತಹ ಸುಳ್ಳು ಪ್ರಚಾರದಲ್ಲಿ ಬಿಜೆಪಿ ತೊಡಗಿದೆ. ಬಿಜೆಪಿಯವರು ರಾಜ್ಯದಲ್ಲಿ 9 ವರ್ಷಗಳ ಕಾಲ ಅಧಿಕಾರಿದಲ್ಲಿದ್ದರೂ ಇಂತಹ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದರೆ, ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದರು. ರಾಜ್ಯದ ಬಿಜೆಪಿಯವರ ಸಾಧನೆ ಏನು? ಎಂದು ಪ್ರಶ್ನಿಸಿದರು.
