ದಲಿತ ವಿದ್ಯಾರ್ಥಿ ಚಿಕಿತ್ಸೆಗೆ ಮಂಗಳಮುಖಿಯರಿಂದ65 ಸಾವಿರ ರೂ

.
ಹೊನ್ನಾವರ : ಹೊನ್ನಾವರದಲ್ಲಿ ನೆಲೆಸಿರುವ ಮಂಗಳಮುಖಿಯರು ಅನಾರೋಗ್ಯ ಪೀಡಿತ ದಲಿತ ವಿದ್ಯಾರ್ಥಿ ನಂದನ್ ಎಂಬವವನಿಗೆ ಚಿಕಿತ್ಸೆಗಾಗಿ ೬೫ ಸಾವಿರ ರೂ.ಗಳನ್ನು ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ಸಾರ್ವಜನಿಕರಿಂದ ಸಂಗ್ರಹಿಸಿ ನೀಡಿದ್ದಾರೆ. ಈ ಮಳೆಗಾಲದಲ್ಲಿ ಡಬ್ಬ ಹಿಡಿದು ಅಂಗಡಿ ಅಂಗಡಿ ಸುತ್ತುತ್ತ ಕೆಲವೊಮ್ಮೆ ಕುಹಕದ ಮಾತನ್ನು ಕೇಳಿಸಿಕೊಳ್ಳುತ್ತಾ ಬೇಸರಿಸದೇ ದೊಡ್ಡ ಮನಸ್ಸಿನಿಂದ ಹಣಕೊಟ್ಟ ಈ ತಾಲೂಕುಗಳ ಸಾವಿರಾರು ಜನರನ್ನು ಸ್ಮರಿಸಿ ಕೃತಜ್ಞತೆ ಹೇಳಿ ಹಣವನ್ನು ಬಾಲಕನಿಗೆ ನೀಡಿದ್ದಾರೆ. ೫೦ ಸಾವಿರ ರೂ. ಜಿಲ್ಲೆಯ ಮಂಗಳಮುಖಿಯರ ಅಂತರAಗ ಸಂಸ್ಥೆಯ ಸದಸ್ಯರಾದ ಆಯಿಶಾ, ಸುಹಾನಾ, ಉಡುಪಿ ಸಂಧ್ಯಾ, ಸೋನು, ಪಿಂಕಿ, ರೋಶನಿ ಇತರರು ಸಂಗ್ರಹಿಸಿದ್ದರೆ ಉಳಿದ ೧೨ ಸಾವಿರ ರೂ.ಗಳನ್ನು ಉಡುಪಿ ಜಿಲ್ಲೆಯ ಮಂಗಳಮುಖಿಯರ ಆಶ್ರಯ ಸಮುದಾಯ ಸಂಘಟನೆಯ ಸದಸ್ಯರಾದ ಲಾವಣ್ಯ, ಸಮೀಕ್ಷಾ, ಸಂಜೀವ, ಉಡುಪಿ ಸುದರ್ಶನ್ ಮೊದಲಾದವರು ಸಂಗ್ರಹಿಸಿ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಉಡುಪಿಯ ಸಂಧ್ಯಾ ಸಮಾಜದಲ್ಲಿ ಮಂಗಳಮುಖಿಯರೆಂದರೆ ಒಂದು ಬಗೆಯ ತಿರಸ್ಕಾರ, ನಮ್ಮದಲ್ಲದ ತಪ್ಪಿಗೆ ಹೀಗೆ ಹುಟ್ಟಿದ್ದೇವೆ, ನಾವೂ ಮನುಷ್ಯರೇ ಹೊಟ್ಟೆಪಾಡಿಗಾಗಿ ಕೈಚಾಚುತ್ತೇವೆ. ನಮ್ಮಿಂದ ಸಾಧ್ಯವಾದ ನೆರವನ್ನು ಸಮಾಜಕ್ಕೆ ನೀಡುತ್ತೇವೆ. ಸಮಾಜದ ಕೊಟ್ಟದ್ದನ್ನು ಉಣ್ಣುತ್ತೇವೆ. ಸಮಾಜದ ಇತರ ವರ್ಗಗಳಲ್ಲಿ ಇದ್ದಂತೆ ಕೆಟ್ಟವರು ನಮ್ಮಲ್ಲಿಯೂ ಇದ್ದಾರೆ. ಬೇಡದ ವೃತ್ತಿ ಮಾಡುವವರು ಎಲ್ಲ ವರ್ಗದಲ್ಲೂ ಇದ್ದಾರೆ. ಆದ್ದರಿಂದ ಸಮಾಜ ನಮ್ಮನ್ನು ತಮ್ಮವರಾಗಿ ನೋಡಿ ಸಹಾಯ ಮಾಡಬೇಕು. ಮಂಗಳಮುಖಿಯರು ಪದವಿ ಪಡೆದು ನೌಕರಿ ಹಿಡಿದವರಿದ್ದಾರೆ. ಅನಾಥಾಲಯ ನಡೆಸುವವರು, ಹೊಟೆಲ್ ನಡೆಸುವವರು ಇದ್ದಾರೆ. ನಮ್ಮವರಿಗೆ ಪದ್ಮಶ್ರೀ ಬಂದಿದೆ ಎಂದು ಹೇಳುತ್ತಾರೆ. ಇವರು ಹೊನ್ನಾವರದಲ್ಲಿ ೧೫-೨೦ ವರ್ಷಗಳಿಂದ ನೆಲೆಸಿದ್ದಾರೆ. ಇವರದೇ ಜನ ಬಂದು ಹೋಗುತ್ತಾರೆ. ಹಬ್ಬ-ಹುಣ್ಣಿಮೆ ಆಚರಿಸುತ್ತಾರೆ. ನಾವು ಮಾಡಿದ ಒಳ್ಳೆಯ ಕೆಲಸವನ್ನು ಸಮಾಜ ಗುರುತಿಸಬೇಕು ಎಂದು ಬಯಸುವುದಾಗಿ ಹೇಳುತ್ತಾರೆ.