
ಶಿವಮೊಗ್ಗ: ದೇಶದ ಅತಿ ಉದ್ದದ ಎರಡನೇ ಕೇಬಲ್ ಸೇತುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ಸೇತುವೆಯನ್ನು ಇಂದು (ಜು.14) ಕೇಂದ್ರದ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಬಹುನಿರೀಕ್ಷಿತ ಈ ಸೇತುವೆಯು ಶರಾವತಿ ದ್ವೀಪದ ಜನರ ದಶಕಗಳ ಬೇಡಿಕೆಯಾಗಿತ್ತು. 2010ರಲ್ಲಿ ಪ್ರಾರಂಭವಾದ ಸೇತುವೆಯು 2025ರಲ್ಲಿ ಮುಕ್ತಾಯವಾಗಿದೆ. ಸೇತುವೆಗೆ ಸುಮಾರು 423.15 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೇತುವೆ ನಿರ್ಮಾಣಕ್ಕಾಗಿ ಸಾಗರ ಪಟ್ಟಣದಿಂದ ಹೊಸನಗರ ತಾಲೂಕಿನ ಮರಕುಟುಕದ ತನಕ ಗ್ರಾಮೀಣ ಭಾಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ಡರ್ಜೆಗೆ ಏರಿಸಿ ಮೊದಲ ಹಂತದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.
ಸೇತುವೆ ನಿರ್ಮಾಣದ ನಂತರ ಸಾಗರದಿಂದ ಅಂಬರಗೊಡ್ಲು ತನಕ ಹಾಗೂ ಹೊಳೆಬಾಗಿಲಿನಿಂದ ಮರಕುಟಕ ತನಕದ ರಸ್ತೆಯನ್ನು ಅಗಲೀಕರಣದ ಜೊತೆಗೆ ನೇರವಾದ ರಸ್ತೆಯನ್ನು ಮಾಡಲಿದ್ದಾರೆ. ಇಂದು ಬೆಳಗ್ಗೆ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ನಾಗಪುರದಿಂದ ವಿಶೇಷ ವಿಮಾನದಿಂದ ಹೊರಟ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ನಲ್ಲಿ ಸಿಗಂದೂರು ಬಳಿಯಲ್ಲಿ ನಿರ್ಮಾಣ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಇಳಿದು ಸಿಗಂದೂರು ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದು, ಸೇತುವೆ ಉದ್ಘಾಟನೆ ಮಾಡಲಿದ್ದಾರೆ. ಇಲ್ಲಿಂದ ಹೆಲಿಕಾಪ್ಟರ್ನಲ್ಲಿ ಸಾಗರದ ಮಂಕಳಲೆ ಹೆಲಿಪ್ಯಾಡ್ ಗೆ ಬಂದು ಸಾಗರದ ನೆಹರು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರದ ಇನ್ನೋರ್ವ ಮಂತ್ರಿಯಾದ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಸಂಸದ ಬಿ. ವೈ. ರಾಘವೇಂದ್ರ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರುಗಳು ಭಾಗಿಯಾಗಲಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ 925 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಸಾಗರದಿಂದ ಮರಕುಟಕವರೆಗೆ, ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ ದ್ವಿಪಥದ ಸಂಪರ್ಕ ರಸ್ತೆಯ ಶಂಕುಸ್ಥಾಪನೆ ಮಾಡಲಿದ್ದಾರೆ.

ಕಾರ್ಯಕ್ರಮದ ಪೂರ್ವ ತಯಾರಿಗಾಗಿ ನಿನ್ನೆ ಸಂಸದರು ಶಾಸಕರು, ಮಾಜಿ ಶಾಸಕರು ಹಾಗೂ ಸ್ಥಳೀಯ ಮುಖಂಡರ ಜೊತೆ ಸೇರಿ ಸೇತುವೆ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ ಅವರು, “ಸೇತುವೆ ಇಲ್ಲದ ವೇಳೆಯಲ್ಲಿ ಹಲವರು ತೆಪ್ಪ ದುರಂತವಾಗಿ ಮುಳುಗಿ ಸಾವನ್ನಪ್ಪಿದ್ದಾರೆ. ಸೇತುವೆಗಾಗಿ ಅನೇಕರು ಹೋರಾಟ ನಡೆಸಿದ್ದಾರೆ. ಅವರ ಹೋರಾಟದ ಫಲವಾಗಿ ಇಂದು ಸೇತುವೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣದ ವೇಳೆ ನಾನೂ ಒಬ್ಬ ಜನಪ್ರತಿನಿಧಿಯಾಗಿ ಭಾಗಿಯಾಗುತ್ತಿರುವುದು ನನ್ನ ಪುಣ್ಯ. ಸೇತುವೆ ಉದ್ಘಾಟನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಲ್ಹಾದ್ ಜೋಶಿ ಆಗಮಿಸಲಿದ್ದಾರೆ. ಜೊತೆಗೆ ಮಂತ್ರಿಗಳು, ಶಾಸಕರು ಸೇರಿದಂತೆ ಇತರರು ಆಗಮಿಸಲಿದ್ದಾರೆ” ಎಂದರು.

ಇನ್ನು, ಸೇತುವೆ ಉದ್ಘಾಟನೆ ಹಿನ್ನೆಲೆಯಲ್ಲಿ ಸೇತುವೆಯನ್ನು ಮಾವಿನ ತೋರಣ ಹಾಗೂ ಬಾಳೆ ಕಂದುಗಳಿಂದ ಸಿಂಗರಿಸಲಾಗಿದೆ. ಸೇತುವೆ ಉದ್ಘಾಟನೆಗೆ ಆಗಮಿಸುವ ಅತಿಥಿಗಳಿಗಾಗಿ ಸಿಗಂದೂರು ದೇವಾಲಯ ಸಮಿತಿ ವತಿಯಿಂದ ಸೇತುವೆಯ ಮಾದರಿಯನ್ನು ಮರದಲ್ಲಿ ನಿರ್ಮಿಸಿ ಕೊಡಲಾಗುತ್ತಿದೆ.
