ಶಕ್ತಿ ಯೋಜನೆ ಹೊಸ ಮೈಲಿಗಲ್ಲು: ಮಹಿಳಾ ಪ್ರಯಾಣಿಕರಿಗೆ ಇಂದು 500ನೇ ಕೋಟಿ ಟಿಕೆಟ್ ವಿತರಣೆ

ಬೆಂಗಳೂರು: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಜನಪ್ರಿಯವೆನಿಸಿರುವ ಸರಕಾರಿ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ಶಕ್ತಿ ಯೋಜನೆ ಹೊಸ ಮೈಲಿಗಲ್ಲಿ ಸ್ಥಾಪಿಸಿದ್ದು, ಇಂದು 500ನೇ ಕೋಟಿ ಟಿಕೆಟ್​​ ಉಚಿತ ವಿತರಣೆ ತಲುಪಲಿದೆ.

ಕಾಂಗ್ರೆಸ್​​​​​ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ 2023ರ ಜೂನ್​​​​​​ 11ರಂದು ಅನುಷ್ಠಾನಕ್ಕೆ ಬಂದ ಶಕ್ತಿ ಗ್ಯಾರಂಟಿ ಯೋಜನೆಯಡಿ ಕಳೆದ 2 ವರ್ಷ ಒಂದು ತಿಂಗಳ ಅವಧಿಯಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ಸರಕಾರಿ ಸಾರಿಗೆ ಸಂಸ್ಥೆಯ 4 ನಿಗಮಗಳ ಸಾಮಾನ್ಯ ಸಾರಿಗೆ ಬಸ್​ಗಳಲ್ಲಿ ಇದುವರೆಗೆ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಿದ ಉಚಿತ ಟಿಕೆಟ್​ಗಳ ಸಂಖ್ಯೆ ಇಂದು 500 ಕೋಟಿ ತಲುಪಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 500ನೇ ಕೋಟಿ ಉಚಿತ ಟಿಕೆಟ್ ವಿತರಣೆಗೆ ಸಾಕ್ಷಿಯಾಗಲಿದ್ದಾರೆ.

ಕೆಎಸ್​ಆರ್​ಟಿಸಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಸಾರಿಗೆ ಸಂಸ್ಥೆಯ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಇದುವರೆಗೆ ಅಂದಾಜು 840 ಕೋಟಿ ಟಿಕೆಟ್​ಗಳನ್ನು ಪಡೆದು ಪ್ರಯಾಣಿಕರು ಪ್ರಯಾಣಿಸಿದ್ದು ಇದರಲ್ಲಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪಡೆದ ಟಿಕೆಟ್​ಗಳ ಸಂಖ್ಯೆ 500ಕೋಟಿಗಳಷ್ಟಾಗಿದೆ.

ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಉಚಿತ ಟಿಕೆಟ್​ ಪಡೆದು ಪ್ರಯಾಣಿಸಿದ ಟಿಕೆಟ್​ಗಳ ಮೌಲ್ಯ ಅಂದಾಜು 12,600 ಕೋಟಿ ರೂಪಾಯಿಗಳಾಗಿದೆ. ಪ್ರತಿ ದಿನ ಅಂದಾಜು 80 ಲಕ್ಷಕ್ಕೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ.

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗುವ ಮೊದಲು ಸರಕಾರದ ಅಧೀನಕ್ಕೆ ಒಳಪಟ್ಟ ಎಲ್ಲ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಪ್ರತಿ ದಿನ 84.5 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು. ಶಕ್ತಿ ಯೋಜನೆ ಅನುಷ್ಠಾನದ ಬಳಿಕ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರತಿ ದಿನ ಸುಮಾರು 1. 10 ಕೋಟಿ ಜನ ಪ್ರಯಾಣಿಸುತ್ತಿದ್ದು ಇದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಅಂದಾಜು 80 ಲಕ್ಷಗಳಾಗಿವೆ.

ಶಕ್ತಿ ಯೋಜನೆಯಲ್ಲಿ ಬಡವರು ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರು ಉಚಿತ ಟಿಕೆಟ್​ ಪಡೆದು ಪ್ರಯಾಣಿಸುತ್ತಿದ್ದಾರೆ. ದುಡಿಯುವ ಮಹಿಳೆಯರು, ವಿದ್ಯಾರ್ಥಿನಿಯರು, ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ರಾಜ್ಯದ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಅಧಿಕಗೊಂಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿಯಲ್ಲಿಯೇ ಅತಿ ಹೆಚ್ಚು ಜನ ಮಹಿಳಾ ಪ್ರಯಾಣಿಕರು ಉಚಿತ ಟಿಕೆಟ್​​ ಪಡೆದು ಪ್ರಯಾಣಿಸಿದ್ದಾರೆ. ಬಿಎಂಟಿಸಿನಲ್ಲಿ 157.33 ಕೋಟಿ, ಕೆಎಸ್​ಆರ್​ಟಿಸಿನಲ್ಲಿ 151 ಕೋಟಿ ಟಿಕೆಟ್, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 117 ಕೋಟಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಸುಮಾರು 72 ಕೋಟಿ ಉಚಿತ ಟಿಕೆಟ್​ಗಳನ್ನು ಪಡೆದು ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸಂಚಾರ ಮಾಡಿದ್ದಾರೆ ಎಂದು ರಸ್ತೆ ಸಾರಿಗೆ ತಿಳಿಸಿದೆ.

ಬಿಎಂಟಿನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದರೆ, ಟಿಕೆಟ್ ಮೌಲ್ಯಗಳ ಲೆಕ್ಕಾಚಾರದಲ್ಲಿ ಕೆಎಸ್​ಆರ್​ಟಿಸಿಯಲ್ಲಿ 4,786 ಕೋಟಿ, ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 3,115 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 2,521 ಕೋಟಿ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2,169 ಕೋಟಿ ರೂಪಾಯಿ ಮೌಲ್ಯದಷ್ಟು ಟಿಕೆಟ್​ನ್ನು ಉಚಿತವಾಗಿ ಮಹಿಳೆಯರಿಗೆ ನೀಡಲಾಗಿದೆ.

ಶಕ್ತಿ ಯೋಜನೆ ಸಂಭ್ರಮ: “ಮಹಿಳಾ ಪ್ರಯಾಣಿಕರಿಗೆ ಇಂದು 500ನೇ ಕೋಟಿಯ ಉಚಿತ ಟಿಕೆಟ್​​ ನೀಡುವ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಲಾಗುತ್ತದೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಟ್ಟಿ ತಿಳಿಸಿದ್ದಾರೆ. 500ನೇ ಕೋಟಿಯ ಟಿಕೆಟ್​ನ್ನು ಮಹಿಳಾ ಪ್ರಯಾಣಿಕರಿಗೆ ಸಿಎಂ, ಡಿಸಿಎಂ ಬಸ್​ನಲ್ಲಿ ಸಂಚರಿಸಿ ವಿತರಣೆ ಮಾಡಲಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಈ ವೇಳೆ ಉಡುಗೊರೆ ನೀಡಲಿದ್ದಾರೆ‌. ಪ್ರತಿ ಜಿಲ್ಲೆಯಲ್ಲಿ ಒಂದು ಬಸ್​ನ್ನು ಅಲಂಕರಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಮತ್ತು ಹೂವನ್ನು ನೀಡಲಾಗುತ್ತದೆ.