ಜಾತಿ ಬೇಧ ಮರೆತು ಮನುಷ್ಯರೆಂಬ ನೆಲೆಯಲ್ಲಿ ಒಂದಾಗಬೇಕು – ಮಮತಾದೇವಿ

ಭಟ್ಕಳ: ಸದ್ಭಾವನಾ ಮಂಚ್ ಭಟ್ಕಳವು ಸದ್ಭಾವನಾ ದಿನದ ಅಂಗವಾಗಿ ಇಲ್ಲಿನ ಶಮ್ಸುದ್ದೀನ್ ವೃತ್ತದ ಬಳಿ ಸಾರ್ವಜನಿಕ ಸದ್ಭಾವನಾ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ, ಕೋಮು ಸೌಹಾರ್ದತೆ ಮತ್ತು ಶಾಂತಿಯನ್ನು ಪ್ರಚಾರಗೊಳಿಸುವಲ್ಲಿ ಭಟ್ಕಳದ ಸದ್ಭಾವನಾ ಮಂಚ್ ಸಕ್ರೀಯವಾಗಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಉತ್ತಮ ಸಂದೇಶವನ್ನು ನೀಡುತ್ತಿದೆ ಎಂದರು.

ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್ ಕುಮಾರ್, ದೇಶದಲ್ಲಿ ಇಂದು ಕೋಮುದಳ್ಳೂರಿ, ದ್ವೇಷ ಅಸೂಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ದಿ.ರಾಜೀವ್ ಗಾಂಧಿಯವರ ಹುಟ್ಟು ಹಬ್ಬವನ್ನು ಸದ್ಭಾವನಾ ದಿನವನ್ನಾಗಿ ಆಚರಿಸುವುದರ ಮೂಲಕ ದೇಶದಲ್ಲಿ ಪ್ರೀತಿ ಪ್ರೇಮವನ್ನು ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ. ಮುಂಬರುವ ದಿನಗಳು ಚುನಾವಣೆಯ ದಿನಗಳಾಗಿದ್ದು ನಮ್ಮಲ್ಲಿ ಅಶಾಂತಿ ಹರಡುವವರು, ಶವದ ಮೇಲೆ ರಾಜಕೀಯ ಮಾಡುವವರು ದೇಶದಲ್ಲಿ ದ್ವೇಷದ ವಾತವರಣ ಸೃಷ್ಟಿಸಲು ಸನ್ನದ್ಧರಾಗಿದ್ದಾರೆ. ಸದ್ಭಾವನಾ ಪ್ರತಿಜ್ಞೆಯನ್ನು ಸ್ವೀಕರಿಸುವುದರ ಮೂಲಕ ನಾವು ದೇಶವನ್ನು ಹಾಳು ಮಾಡುವ ಎಲ್ಲ ತಂತ್ರಗಳನ್ನು ಮೆಟ್ಟಿನಿಲ್ಲಬೇಕು ಎಂದು ಕರೆ ನೀಡಿದರು.