ಕಲಬುರಗಿ: ಹೂಡಿಕೆಯಲ್ಲಿನ ಅಧಿಕ ಲಾಭಾಂಶದ ಹಣ ನೀಡುವುದಾಗಿ ನಂಬಿಸಿ ಸುಮಾರು 800ಕ್ಕೂ ಅಧಿಕ ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಲಬುರಗಿಯ ಸಿಇಎನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೆಲಂಗಾಣ ಮೂಲದ ಎಂ.ಡಿ. ರಾಮಚಂದ್ರ ಚಾರಿ ಅಕುಲ್ ಅಲಿಯಾಸ್ ರಾಮು ಅಕುಲ್ ಚಾರಿ ಬಂಧಿತ ಆರೋಪಿ. ಕಲಬುರಗಿ ನಗರದ ಹೈಕೋರ್ಟ್ ಬಳಿ ಇರುವ ಅಕ್ಕಮಹಾದೇವಿ ಕಾಲೋನಿಯಲ್ಲಿ ವೀನಸ್ ಎಂಟರ್ಪ್ರೈಸಸ್ ಎಂಬ ಕಚೇರಿ ತೆರೆದಿದ್ದ ಆರೋಪಿ, ವಿಜಯಪುರ ಹಾಗೂ ಬೀದರ್ ಜಿಲ್ಲೆಯ ಸುಮಾರು 800ಕ್ಕೂ ಅಧಿಕ ಜನರಿಂದ ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿಕೊಂಡು ಪಂಗನಾಮ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
6 ತಿಂಗಳ ಸ್ಕೀಮ್, 8 ತಿಂಗಳ ಸ್ಕೀಮ್, 12 ತಿಂಗಳ ಸ್ಕೀಮ್ನಂತೆ ಹೂಡಿಕೆ ಮಾಡಿದ ಗ್ರಾಹಕರಿಗೆ ಪ್ರತಿ ತಿಂಗಳು 1 ಲಕ್ಷಕ್ಕೆ ಇಪ್ಪತ್ತು ಸಾವಿರದಂತೆ ಆದಾಯದ ಹಣ ನೀಡುವುದಾಗಿ ನಂಬಿಸಿದ್ದ. ಅದಕ್ಕೆ ತಕ್ಕಂತೆ ಅಗ್ರಿಮೆಂಟ್ ಬಾಂಡ್ ಮಾಡಿ ಕೊಡುವ ಮೂಲಕ ಕೆಲವು ತಿಂಗಳು ಆದಾಯದ ಹಣವನ್ನೂ ಕೂಡ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
20 ರಿಂದ 25 ಕೋಟಿ ರೂ. ವಂಚನೆ: ಷೇರು ಮಾರುಕಟ್ಟೆಯಲ್ಲಿ ರಿಯಲ್ ಎಸ್ಟೇಟ್ಗೆ ಹಣ ಹೂಡಿಕೆ ಮಾಡುವ ಮೂಲಕ ಅದರಿಂದ ಬಂದ ಲಾಭದಿಂದ ನಿಮಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಗೆ ಸುಳ್ಳು ಹೇಳಿ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಜನರು ಲಕ್ಷಾಂತರ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆರೋಪಿಯು ವೀನಸ್ ಎಂಟರ್ಪ್ರೈಸಸ್, ವೀನಸ್ ಆಗ್ರೋ ಎಂಟರ್ಪ್ರೈಸಸ್, ವೀನಸ್ ಇನ್ ಫ್ರಾವೆಂಚರ್ಸ್ ಎಂಬ ಸಂಸ್ಥೆಗಳನ್ನು ಸ್ಥಾಪಿಸಿ, ಜನರಿಂದ 20 ರಿಂದ 25 ಕೋಟಿ ರೂ.ಗಳಷ್ಟು ಹಣ ಪಡೆದು ವಂಚಿಸಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.
ಸದ್ಯ ಹೈದರಾಬಾದ್ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ರಾಮು ಅಕುಲ್ ಚಾರಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಆಯುಕ್ತರ ಮಾಹಿತಿ: ಪ್ರಕರಣದ ಬಗ್ಗೆ ವಿವರಿಸಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. “ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ನೂರಾರು ಜನರಿಗೆ ಮೋಸ ಮಾಡಿರುವ ಆರೋಪಿಯನ್ನು ಕಲಬುರಗಿ ನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೊಬ್ಬರು 1 ಕೋಟಿ 7 ಲಕ್ಷ ರೂ.ಗಳಷ್ಟು ಹೂಡಿಕೆ ಮಾಡಿದ್ದರು. ಅದರಲ್ಲಿ ಕೇವಲ 10 ಲಕ್ಷ ಮಾತ್ರ ರಿಟರ್ನ್ ಬಂದಿದೆ. ಅಂದಾಜು 97 ಲಕ್ಷ ಹಣ ನಷ್ಟವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು” ಎಂದು ತಿಳಿಸಿದರು.
”ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತ ವೀನಸ್ ಎಂಟರ್ಪ್ರೈಸಸ್ ಎಂಬ ಕಚೇರಿಯನ್ನು ತೆರೆದಿರುವುದು ಗೊತ್ತಾಯಿತು. ದೂರು ದಾಖಲಾಗುವ ಕೆಲವೇ ದಿನಗಳ ಹಿಂದೆ ಆ ಕಚೇರಿಗಳನ್ನು ಮುಚ್ಚಿರುವ ಆರೊಪಿ, ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ. ಇದರಿಂದ ಹೂಡಿಕೆದಾರ ಹೆದರಿ ದೂರು ನೀಡಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ಕರೆತಂದು, ವಿಚಾರ ನಡೆಸಿದಾಗ ಸುಮಾರು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ” ಎಂದು ಹೇಳಿದರು.
”ಆರೋಪಿಯು ತೆಲಂಗಾಣದ ರಂಗಾರೆಡ್ಡಿ ಮೂಲದವ. ಈತ ಬಿ.ಎ ಪದವಿ ಪಡೆದಿದ್ದಾನೆ. ಬಳಿಕ ಏರ್ಫೋರ್ಸ್ನಲ್ಲಿ ಕಾರ್ಯ ನಿರ್ವಹಿಸಿದ್ದಾನೆ. ಈ ಮಧ್ಯೆ ತಂದೆ ನಿಧನರಾದ ನಂತರ ಕೆಲಸದಿಂದ ನಿವೃತ್ತಿ ತೆಗೆದುಕೊಂಡಿದ್ದ. ಅಲ್ಲಿಂದ ಬಂದು ಹೈದರಾಬಾದ್ನಲ್ಲಿ ರಿಯಲ್ ಎಸ್ಟೇಟ್ ಮಾರ್ಕೆಟಿಂಗ್ ಶುರು ಮಾಡಿದ್ದ. ಅದರಲ್ಲೂ ನಷ್ಟ ಹೊಂದಿದ್ದ. ನಂತರ ಬಾಂಬೆಯಿಂದ ಸೆಕೆಂಡ್ ಹ್ಯಾಂಡ್ ಕಾರು ತಂದು ಬ್ಯುಸಿನೆಸ್ ಮಾಡಲು ನೋಡಿದಾಗ ಅದರಲ್ಲೂ ನಷ್ಟ ಕಂಡಿದ್ದಾನೆ. ಕೊನೆಗೆ ಕಲಬುರಗಿ ಹೊರವಲಯದಲ್ಲಿನ ಸೇಲ್ ಆಗದ ಜಾಗಗಳನ್ನು ಮಾರಲು, ಮತ್ತೆ 30-40 ಪರ್ಸೆಂಟ್ ಕಮಿಷನ್ನಲ್ಲಿ ವ್ಯವಹಾರ ನಡೆಸಲು 2019ರಲ್ಲಿ ಇಲ್ಲಿಗೆ ಬಂದಿದ್ದ. ಅಲ್ಲಿ ಕಚೇರಿಗಳನ್ನು ತೆರೆದು ಗ್ರಾಹಕರಿಗೆ ಹೂಡಿಕೆಯ ಆಮಿಷವೊಡ್ಡಿದ್ದ” ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ವಿವರಿಸಿದರು.

