ಮೀನುಗಾರರ ದೋಣಿ ಪಲ್ಟಿ – ಒಬ್ಬರು ಸಾವು, ಇನ್ನೊಬ್ಬ ನಾಪತ್ತೆ, ಇಬ್ಬರು ಪಾರು

ಭಟ್ಕಳ:ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಓರ್ವ ಮೃತಪಟ್ಟು,ಮತ್ತೋರ್ವ ನಾಪತ್ತೆಯಾಗಿರುವ ಘಟನೆ ಜು.10ರ ಗುರುವಾರ ಮುರ್ಡೇಶ್ವರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಾಧವ ಹರಿಕಾಂತ (45) ಮೃತಪಟ್ಟವರು.

ಜನಾರ್ಧನ ಎ.ಹರಿಕಾಂತ ಎಂಬವರಿಗೆ ಸೇರಿದ ಗೆಲ್ನೆಟ್ ದೋಣಿಯಲ್ಲಿ ಗುರುವಾರ (ಜು.10ರ) ಬೆಳಿಗ್ಗೆ ಮುರ್ಡೇಶ್ವರದಿಂದ ನಾಲ್ವರು ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಸಮುದ್ರ ಪಾಲಾಗಿದ್ದರು.

ಘಟನೆ ಪರಿಣಾಮ ನಾಲ್ವರು ಮೀನುಗಾರರಲ್ಲಿ ಮಾಧವ ಹರಿಕಾಂತ ಎಂಬವರು ನೀರಿನಲ್ಲಿ ಮುಳುಗಿದ್ದು ತಕ್ಷಣ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮೃತಪಟ್ಟರು.

ಇನ್ನೋರ್ವ ಮೀನುಗಾರ ವೆಂಕಟೇಶ ಅಣ್ಣಪ್ಪ ಹರಿಕಾಂತ (26) ಎಂಬವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಅವರ ಶೋಧ ಕಾರ್ಯ ನಡೆದಿದೆ.

ಆನಂದ ಅಣ್ಣಪ್ಪ ಹರಿಕಾಂತ ಹಾಗೂ ಇನ್ನೋರ್ವ ಮೀನುಗಾರ ದಡ ಸೇರಿದ್ದು ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದ ತಕ್ಷಣ ಮುರ್ಡೇಶ್ವರ ಠಾಣೆಯ ಪೊಲೀಸರು, ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಮೀನುಗಾರರು, ನಾಗರೀಕರು ನಾಪತ್ತೆಯಾದವರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.