ಮೊಟ್ಟೆ ಎಸೆತ ಪ್ರಕರಣ: ರಾಜಕೀಯ ಮುಖಂಡರು ಹೇಳಿದ್ದೇನು.?

ಮಳೆಹಾನಿ ಪ್ರದೇಶದ ವೀಕ್ಷಣೆ ಮಾಡಲು ಮಡಿಕೇರಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾವ ನಾಯಕರು ಏನು ಹೇಳಿದ್ರು ನೋಡೋಣ.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗಾಂಧಿಯನ್ನು ಕೊಂದವರು ನನ್ನನ್ನು ಬಿಡ್ತಾರಾ.? ನಾನ್ಯಾವ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವೇನಾದರೂ ಮೊಟ್ಟೆ ಕೈಗೆ ತೆಗೆದುಕೊಂಡರೆ ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ ಎಂದು ಶಿವಾಜಿ ನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮಗೆ ಶಕ್ತಿ ಇಲ್ಲ ಎಂದು‌ ಇಲ್ಲಿ ಸೇರಿಲ್ಲ, ನಾವು ಗಾಂಧಿ ತತ್ವಕ್ಕೆ ಸೇರಿದವರು. ನಾವು ಅದಕ್ಕೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಕೊಡಗಿಗೆ ಭೇಟಿ ನೀಡಿದ ವೇಳೆ ಅವರ ಮೇಲೆ ಮೊಟ್ಟೆ ಎಸೆದ ಘಟನೆ ಖಂಡನೀಯ. ಆರೋಪಿಗಳ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಮತ್ತು ಸಿದ್ದರಾಮಯ್ಯ ಅವರ ಕ್ಷಮೆ ಯಾಚಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿಕೆ ನೀಡಿದ್ದಾರೆ.

ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕೆ ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಜೀವಬೆದರಿಕೆಯಿದೆ. ಹಿಂದೂ ಸಂಘಟನೆಗಳಿಂದಲೇ ಬೆದರಿಕೆಗಳು ಬಂದಿವೆ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮೊಟ್ಟೆ ಎಸೆದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಘಟನೆ‌ ನಡೆದಿರುವ ಹಿಂದೆ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ಕಾರ್ಯಕರ್ತರೇ‌ ಈ‌ ಕೃತ್ಯ ಮಾಡಿದ್ದು, ಇದರ‌ ನೈತಿಕ ಹೊಣೆ‌ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ‌ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಆಗ್ರಹಿಸಿದರು.

ಪ್ರಚೋದನಕಾರಿ ಹೇಳಿಕೆ ನೀಡುವಲ್ಲಿ ನಿಸ್ಸೀಮರಾದ ಸಿದ್ದರಾಮಯ್ಯನವರು ಮುಸ್ಲಿಂ ಏರಿಯಾದಲ್ಲಿ ವೀರ ಸಾವರ್ಕರ್‌ ಫೋಟೋ ಯಾಕೆ.? ಎಂದು ಕೇಳಿ ದೇಶಭಕ್ತರನ್ನು ಕೆರಳಿಸಿದರು. ಈಗ ತಮಗೂ ಮೊಟ್ಟೆ ಎಸೆಯಲು ಬರಲ್ವಾ.? ಎಂದು ಕೇಳುವ ಮೂಲಕ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ತಂದಿಟ್ಟು ತಮಾಷೆ ನೋಡುತ್ತಿದ್ದಾರೆ ಎಂದು ಸಚಿವ ಅಶ್ವತ್ ನಾರಾಯಣ್ ಕಿಡಿಕಾರಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ಪ್ರತಿಭಟನೆಗಳು ನಿತ್ಯ ನಡೆಯುತ್ತಿರುತ್ತವೆ. ಆ.26 ರಂದು ಪ್ರತಿಭಟನೆಗೆ ಕರೆ ನೀಡಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಕಡೆಯವರೇ ಉದ್ದೇಶಪೂರ್ವಕವಾಗಿ ಕೋಳಿ ಮೊಟ್ಟೆ ಎಸೆದಿರಬಹುದು. ಯಾರಿಗೆ ಗೊತ್ತು? ಎಂದು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ ನೀಡಿದ್ದಾರೆ.