10,495 ನೇ ಹಾವು ಹಿಡಿದ ಉರಗ ತಜ್ಞ ನಾಗರಾಜ ಶೇಟ್

ಹೊನ್ನಾವರ ಜು. 04: ಕಳೆದ 13 ವರ್ಷಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವುದರ ಜೊತೆ  ಹಾವಿನಿಂದ ಜನ ಕಚ್ಚಿಸಿಕೊಂಡು ಸಾಯುವುದನ್ನು ತಪ್ಪಿಸಿದ ಕರ್ಕಿಯ ನಾಗರಾಜ ಶೇಟ್ ಬಸ್ಟ್ಯಾಂಡ್‌ ಬಳಿ 10,495ನೇ ಹಾವನ್ನು ಹಿಡಿದರು. ಹವ್ಯಾಸವಾಗಿ ಇದನ್ನು ಬೆಳೆಸಿಕೊಂಡಿರುವ ನಾಗರಾಜ ಅವರಿಗೆ ಮಳೆಗಾಲದ ಆರಂಭದಲ್ಲಿ ನಿತ್ಯ ನಾಲ್ಕಾರು ಕರೆಗಳು ಬರುತ್ತವೆ. ಬೇರೆ ತಾಲೂಕಿನಿಂದ ಕರೆ ಬಂದಾಗ ಅಲ್ಲಿಯೇ ಜನರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿಕೊಡುವ ಇವರು ತಾಲೂಕಿನ ಒಳಪ್ರದೇಶಕ್ಕೆ ಹೋಗಿ ಹಾವು ಹಿಡಿದು ತರುತ್ತಾರೆ. ಅರಣ್ಯ ಇಲಾಖೆಯ ಸಹಕಾರದಲ್ಲಿ ಕಾಡಿಗೆ ಬಿಟ್ಟು ಬರುತ್ತಾರೆ. ಇಂದು ಅವರು 8893ನೇ ನಾಗರಹಾವನ್ನು ಹಿಡಿದಿದ್ದಾರೆ.

ಈವರೆಗೆ 102 ಕಾಳಿಂಗ ಸರ್ಪ, ಸಾವಿರಕ್ಕೂ ಹೆಚ್ಚು ಹೆಬ್ಬಾವುಗಳನ್ನು, 102 ಕಾಳಿಂಗ ಸರ್ಪಗಳನ್ನು ಹಿಡಿದಿರುವುದನ್ನು ದಾಖಲಿಸಿಕೊಂಡಿದ್ದಾರೆ. ವೃತ್ತಿಯಿಂದ ಸ್ವರ್ಣಕಾರ ಸಮಾಜದವರಾದ ನಾಗರಾಜ ಹಾವು ಹಿಡಿದಿದ್ದಕ್ಕೆ ಯಾವ ಪ್ರತಿಫಲವನ್ನು ಪಡೆಯುವುದಿಲ್ಲ. ಇದು ನನ್ನ ಸಮಾಜಸೇವೆ, ಉರಗಪ್ರೇಮದ ಕೊಡುಗೆ ಅನ್ನುತ್ತಾರೆ. ಯಾವುದೇ ಉಪಕರಣ ಬಳಸದೇ ನಗುನಗುತ್ತಾ ಹಾವಿನೊಂದಿಗೆ ಮಾತನಾಡುತ್ತ ಹಾವನ್ನು ಹಿಡಿದು ಪ್ಲಾಸ್ಟಿಕ್ ಬಾಟಲ್ ಅಥವಾ ಚೀಲದಲ್ಲಿ ತುಂಬುತ್ತಾರೆ. ತಾಲೂಕಿನಾದ್ಯಂತ ಇವರ ಸೇವೆ ಸಲ್ಲುತ್ತಿದೆ. ಮಳೆಗಾಲದ ಆರಂಭದಲ್ಲಿ ಹಾವುಗಳು ಮೊಟ್ಟೆಯಿಟ್ಟು ಮರಿ ಹೊರಬರುವ ಕಾಲ ಆದ್ದರಿಂದ ಹಾವುಗಳ ಓಡಾಟ, ಕಡಿತ ಜಾಸ್ತಿ ಇದೆ. ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡಬೇಕು.

ಮನೆಯ ಮೂಲೆಯನ್ನು ಸ್ವಚ್ಛವಾಗಿ ಕಣ್ಣಿಗೆ ಕಾಣುವಂತೆ ಇಟ್ಟುಕೊಳ್ಳಬೇಕು. ಕಟ್ಟಿಗೆ, ಕಾಯ್ಸಿಪ್ಪೆ, ಹುಲ್ಲು ಮೊದಲಾದ ರಾಶಿಯಲ್ಲಿ ಕೈ ಹಾಕುವಾಗ ಎಚ್ಚರಿಕೆ ವಹಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ. ತಾಲೂಕಾ ಆಸ್ಪತ್ರೆಯಲ್ಲಿ ಹಾವು, ನಾಯಿ ಕಚ್ಚಿದರೆ ಪ್ರತಿ ಔಷಧ ಲಭ್ಯವಿದೆ, ಹಾವು ಕಡಿದ ಜಾಗದ ಮೇಲೆ ಬಳ್ಳಿಯಿಂದ ಕಟ್ಟಿ ರಕ್ತಸಂಚಾರಕ್ಕೆ ತಡೆ ಮಾಡಿಕೊಂಡು ಸಾಧ್ಯವಾದರೆ ಹಾವು ಕಚ್ಚಿದ ಗಾಯವನ್ನು ಸ್ವಲ್ಪ ದೊಡ್ಡದು ಮಾಡಿ ರಕ್ತಸ್ರಾವ ಹೆಚ್ಚುವಂತೆ ಮಾಡಿ, ಹಾವು ಕಚ್ಚಿದವನನ್ನು ನಿದ್ರಿಸದೇ ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಹಾವು ಬಂದರೆ ಅದರ ಚಲನವಲನದ ಮೇಲೆ ಕಣ್ಣಿಟ್ಟು ನನಗೆ ತಿಳಿಸಬೇಕು ಎಂದು ಅವರು ಅಭಿಪ್ರಾಯ ಪಡುತ್ತಾರೆ.