ಅಕ್ರಮ ಮರುಳು ಸಾಗಾಟ-ಎರಡು ವಾಹನಗಳು ಜಪ್ತಿ

ಹೊನ್ನಾವರ ಮೇ 27 : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಾಲೂಕಿನ ಹೊಸಾಡು ಮತ್ತು ಬಳ್ಳೂರು ಭಾಗದಲ್ಲಿ ದಾಳಿ ನಡೆಸಿ ಎರಡು ವಾಹನಗಳನ್ನ ಜಪ್ತಿ ಮಾಡಿದ್ದಾರೆ.

ಶರಾವತಿ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸಲಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮರಳು ತೆಗೆಯದಂತೆ ಕೋರ್ಟ್ ಆದೇಶವಿದ್ದರೂ ಭಾರೀ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿತ್ತು. ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಸಹ ಜಾರಿಯಲ್ಲಿದ್ದು, ಮೀನುಗಾರರು ಸೇರಿದಂತೆ ಯಾರೂ ಕೂಡ ನದಿ ಹಾಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ.

ಅಕ್ರಮ ಮರಳು ದಂಧೆಕೊರರು ಯಾವ ಆದೇಶವನ್ನ ಲೆಕ್ಕಿಸದೆ ಮರಳುಗಾರಿಕೆ ನಡೆಸುತ್ತಿದ್ದಾರೆ. ದಂಧೆ ನಡೆಯುವ ಬಗ್ಗೆ ವಿರೋಧ ಮಾಡಿದ್ದರೆ ಅಂತಹವರ ವಿರುದ್ಧ ಹಲ್ಲೆಗೆ ಕೂಡ ಮುಂದಾಗುತ್ತಿರುವ ಬಗ್ಗೆ ಸ್ಥಳೀಯರಿಂದ ಆರೋಪಗಳು ಕೇಳಿಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸ್ಥಳೀಯರು ದೂರು ನೀಡಿದ್ದರು.
ಇನ್ನೂ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಕಡಿವಾಣ ಹಾಕಬೇಕಿರೋ ಅಧಿಕಾರಿಗಳು ಇದಕ್ಕೆ ಬ್ರೇಕ್‌ ಹಾಕೋಕೆ ಮುಂದಾಗ್ತಿಲ್ಲ. ಕೇವಲ ಒಂದೆರೆಡು ವಾಹನಗಳ ಮೇಲೆ ಅಲ್ಲಲ್ಲಿ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸಂಪೂರ್ಣ ಕಡಿವಾಣ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ….