ಚಾಮರಾಜನಗರ: ಐದು ಹುಲಿಗಳ ಸಾವಿನ ಬೆನ್ನಲ್ಲೇ ಕೋತಿಗಳ ಮಾರಣಹೋಮ 

ಚಾಮರಾಜನಗರ: ಇತ್ತೀಚೆಗೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳು ಮೃತಪಟ್ಟ ಬೆನ್ನಲ್ಲೇ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪ ಕೋತಿಗಳ ಮಾರಣಹೋಮ ನಡೆಸಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಅಲ್ಲದೆ, ಎರಡು ಕೋತಿಗಳು ಜೀವಂತ ಪತ್ತೆಯಾಗಿವೆ.

ಕಂದೇಗಾಲ – ಕೊಡಸೋಗೆ ರಸ್ತೆಯಲ್ಲಿ ಎರಡು ಚೀಲಗಳಲ್ಲಿ ಕೋತಿಗಳ ಮೃತದೇಹಗಳನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದಾರೆ‌. ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿವೆ. ಎರಡು ಕೋತಿಗಳು ಬದುಕಿವೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕೋತಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪಶು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಮೇಲ್ನೋಟಕ್ಕೆ ವಿಷಪ್ರಾಶನ ಮಾಡಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದು ಅರಣ್ಯ ಸಿಬ್ಬಂದಿ ಹಾಗೂ ಬಂಡೀಪುರ ಅರಣ್ಯ ಇಲಾಖೆಯ ಶ್ವಾನದಳವು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಕೋತಿಗಳ ಮೃತದೇಹಗಳು ಸಿಕ್ಕ ಪ್ರದೇಶವು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ.

ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.