ಓಲಾ, ಊಬರ್ ಬಳಕೆದಾರರಿಗೆ ಶಾಕ್ – ಪೀಕ್ ಅವರ್‌ನಲ್ಲಿ ದುಪ್ಪಟ್ಟು ದರ ವಿಧಿಸಲು ಕೇಂದ್ರ ಒಪ್ಪಿಗೆ

ನವದೆಹಲಿ, ಜುಲೈ 2: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬೈಕ್ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇಟರ್​​ಗಳ (cab aggregators) ಸೇವೆ ಸಂಬಂಧ ಕಾನೂನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಹೊಸ ಮಾರ್ಗಸೂಚಿಗಳನ್ನು (guidelines) ಬಿಡುಗಡೆ ಮಾಡಿದೆ. ಬೈಕ್ ಟ್ಯಾಕ್ಸಿಗಳ ಚಾಲನೆಗೆ ಇದ್ದ ಕಾನೂನು ತೊಡಕನ್ನು ಕೇಂದ್ರ ನಿವಾರಿಸಿದೆ. ಖಾಸಗಿ ನೊಂದಾಯಿತ ಬೈಕುಗಳನ್ನು ಪ್ರಯಾಣಿಕ ಸೇವೆಗೆ ಬಳಸಲು ಅನುಮತಿಸಲಾಗಿದೆ. ಈ ಮಾರ್ಗಸೂಚಿಯಲ್ಲಿ ಓಲಾ, ಊಬರ್​​ನಂತಹ ಕ್ಯಾಬ್ ಅಗ್ರಿಗೇಟರ್​​ಗಳು ಸರ್ಜ್ ಪ್ರೈಸಿಂಗ್ ಏರಿಸಲು ಅಥವಾ ಇಳಿಸಲು ಅನುಮತಿಸಲಾಗಿರುವುದು ವಿಶೇಷ.

ಕ್ಯಾಬ್ ಅಗ್ರಿಗೇಟರ್​​ಗಳಿಗೆ ಡೈನಮಿಕ್ ಪ್ರೈಸಿಂಗ್ ಅವಕಾಶ

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕ್ಯಾಬ್ ಅಗ್ರಿಗೇಟರ್​​ಗಳಿಗೆ ಡೈನಮಿಕ್ ಪ್ರೈಸಿಂಗ್​​ಗೆ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರಗಳು ನಿಗದಿ ಮಾಡುವ ಮೂಲ ದರ ಅಥವಾ ಬೇಸ್ ಫೇರ್​​ಗೆ ಡೈನಮಿಕ್ ಪ್ರೈಸಿಂಗ್ ಅಳವಡಿಕೆ ಮಾಡಬಹುದು. ಅಂದರೆ, ಕ್ಯಾಬ್​​ಗಳಿಗೆ ಬೇಡಿಕೆ ಕಡಿಮೆ ಇದ್ದಾಗ ಮೂಲ ದರಕ್ಕಿಂತ ಶೇ. 50ರವರೆಗೂ ದರ ಕಡಿಮೆ ಮಾಡಬಹುದು. ಬೇಡಿಕೆ ಹೆಚ್ಚಿದ್ದಾಗ, ಅಂದರೆ ಪೀಕ್ ಅವರ್​​​ನಲ್ಲಿ ಮೂಲದರಕ್ಕಿಂತ ಎರಡು ಪಟ್ಟು ಹೆಚ್ಚು ದರ ಹೆಚ್ಚಿಸಲು ಸ್ವಾತಂತ್ರ್ಯ ಇರುತ್ತದೆ.

ಉದಾಹರಣೆಗೆ, ರಾಜ್ಯ ಸರ್ಕಾರವು 3 ಕಿಮೀ ದೂರಕ್ಕೆ ಮೂಲದರ 60 ರೂ ಎಂದು ನಿಗದಿ ಮಾಡಿರುತ್ತದೆ. 3 ಕಿಮೀ ನಂತರದ ಪ್ರಯಾಣಕ್ಕೆ ಪ್ರತೀ ಕಿಮೀಗೆ 20 ರೂ ನಿಗದಿ ಮಾಡಿದೆ ಎಂದಿಟ್ಟುಕೊಳ್ಳೋಣ. ಪೀಕ್ ಅವರ್​​ನಲ್ಲಿ ಮೂಲದರವನ್ನು ಎರಡು ಪಟ್ಟು ಏರಿಸುವ ಅವಕಾಶ ಓಲಾ, ಊಬರ್​​ಗಳಿಗೆ ಇರುತ್ತವೆ. ಹಾಗೆಯೇ, 3 ಕಿಮೀ ನಂತರದ ದರವನ್ನೂ ದುಪ್ಪಟ್ಟುಗೊಳಿಸಬಹುದು.

ಕೇಂದ್ರ ಸಾರಿಗೆ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯ ಮುಖ್ಯಾಂಶಗಳು

  • ಖಾಸಗಿ ಮೋಟಾರುಸೈಕಲ್​​ಗಳನ್ನು ಬೈಕ್ ಟ್ಯಾಕ್ಸಿಗೆ ಬಳಸಬಹುದು. ಇದಕ್ಕೆ ಅನುಮತಿ ನೀಡುವುದು ಬಿಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು
  • ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಸೇವೆಗೆ ಬಳಸುವ ಅಗ್ರಿಗೇಟರ್​ಗಳಿಗೆ ರಾಜ್ಯ ಸರ್ಕಾರಗಳು ಶುಲ್ಕ ವಿಧಿಸಬಹುದು.
  • ಎಲ್ಲಾ ಚಾಲಕರ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಕಣ್ಣಿನ ಪರೀಕ್ಷೆಯೂ ಸೇರಿ ಎಲ್ಲಾ ದೈಹಿಕ ಆರೋಗ್ಯ ತಪಾಸಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಆಗಿರಬೇಕು. ಆಧಾರ್ ದಾಖಲೆಯ ದೃಢೀಕರಣ ಪಡೆಯಬೇಕು
  • ಪ್ರತಿಯೊಬ್ಬ ಚಾಲಕನಿಗೂ 10 ಲಕ್ಷ ರೂ ಟರ್ಮ್ ಇನ್ಷೂರೆನ್ಸ್, ಮತ್ತು 5 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಮಾಡಿಸಿರಬೇಕು.
  • ಚಾಲಕರನ್ನು ನೊಂದಾಯಿಸಿಕೊಳ್ಳುವಾಗ ಅವರಿಗೆ 40 ಗಂಟೆ ತರಬೇತಿ ಕೊಟ್ಟಿರಬೇಕು. ಅಗತ್ಯಬಿದ್ದರೆ ಮೂರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೀಫ್ರೆಶರ್ ಕೋರ್ಸ್ ನೀಡಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳು CERT-in ಸೈಬರ್ ಸೆಕ್ಯೂರಿಟಿ ಗೈಡ್​ಲೈನ್ಸ್ ಪಾಲಿಸಬೇಕು. ಎಐಎಸ್-140 ಟ್ರ್ಯಾಕಿಂಗ್ ಸಿಸ್ಟಮ್ಸ್ ಬಳಸಬೇಕು; ಪ್ಯಾನಿಕ್ ಬಟನ್, ಕಂಟ್ರೋಲ್ ಸೆಂಟರ್ ಇತ್ಯಾದಿ ವ್ಯವಸ್ಥೆ ಇರಬೇಕು. ಇಂಗ್ಲೀಷ್, ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿನ ಯೂಸರ್ ಇಂಟರ್​​ಫೇಸ್ ಹೊಂದಿರಬೇಕು.
  • ಅಗ್ರಿಗೇಟರ್​​ಗಳು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿಸಲು ಗಮನ ಕೊಡಬೇಕು.
  • ವಾಹನವು ಡ್ರೈವರ್​​ಗಳ ಸ್ವಂತದ್ದಾಗಿದ್ದರೆ ಡ್ರೈವರ್​​ಗಳಿಗೆ ದರದಲ್ಲಿ ಕನಿಷ್ಠ ಶೇ. 80 ಪಾಲು ಹೋಗಬೇಕು. ಅಗ್ರಿಗೇಟರ್​​ಗಳಿಗೆ ವಾಹನ ಸೇರಿದ್ದಾದರೆ ಕನಿಷ್ಠ ಶೇ. 60ರಷ್ಟು ದರವು ಡ್ರೈವರ್​​ಗೆ ಸಂದಾಯವಾಗಬೇಕು
  • ಆ್ಯಪ್ ಮೂಲಕ ಎಲ್ಲಾ ಸೇವೆ ನಡೆಯಬೇಕು. ಲೈವ್ ಟ್ರ್ಯಾಕಿಂಗ್, ಡ್ರೈವರ್ ರೇಟಿಂಗ್, ಎಮರ್ಜೆನ್ಸಿ ಬಟನ್ ಇತ್ಯಾದಿ ಸೌಲಭ್ಯ ಇರಬೇಕು.
  • ಅಗ್ರಿಗೇಟರ್​​ಗಳು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್​ನ ನಿಯಮಾವಳಿಗೆ ಬದ್ಧವಾಗಿರಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳ ವಾಹನಗಳಲ್ಲಿ ಎಷ್ಟು ವಾಹನಗಳು ದಿವ್ಯಾಂಗ ಸ್ನೇಹಿಯಾಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬಹುದು.
  • ಅಗ್ರಿಗೇಟರ್​​ಗಳು ಹೊಸ ಪರವಾನಿಗೆ ಪಡೆಯಲು 5 ಲಕ್ಷ ರೂ, ಲೈಸೆನ್ಸ್ ನವೀಕರಣಕ್ಕೆ 25,000 ರೂ ಶುಲ್ಕ ನೀಡಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳು 100 ಬಸ್ ಅಥವಾ 1,000 ಇತರ ವಾಹನಗಳನ್ನು ಚಲಾಯಿಸುತ್ತಿದ್ದರೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ಲಕ್ಷ ರೂ ನೀಡಬೇಕು. ಅದೇ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ಸೆಕ್ಯೂರಿಟಿ ಡೆಪಾಸಿಟ್ ಪ್ರಮಾಣವೂ ಹೆಚ್ಚು ಇರುತ್ತದೆ.