ಕೇಬಲ್ ಆಪರೇಟರ್‌ನ ನದಿ ದುರಂತ – ಮೂರು ದಿನಗಳ ಬಳಿಕ ಶವ ಪತ್ತೆ

ಮೈಸೂರು : ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಣಸೂರು ತಾಲೂಕಿನ ಮೂಕನಹಳ್ಳಿ ಕೇಬಲ್​ ಆಪರೇಟರ್​ ಪುರುಷೋತ್ತಮ್​ (48) ಶವವೂ ಮೂರು ದಿನಗಳ ಹುಡುಕಾಟದ ಬಳಿಕ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಮೂಕನಹಳ್ಳಿಯಲ್ಲಿ ಗ್ರಾಮದ ಡೈರಿ ನಿರ್ದೇಶಕರಾಗಿದ್ದು, ಕೇಬಲ್​ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದರು. ಹಾಗೇ ಆಟೋ, ಟ್ರ್ಯಾಕ್ಟರ್​​ ಇಟ್ಟುಕೊಂಡಿದ್ದರು. ಶನಿವಾರ ರಾತ್ರಿ 9ರ ವೇಳೆಗೆ ಪುರುಷೋತ್ತಮ್ ಹೊಸ ಸೇತುವೆ ಬಳಿ ಆಟೋ ನಿಲ್ಲಿಸಿ, ಮೊಬೈಲ್, ಚಪ್ಪಲಿಯನ್ನು ಅಲ್ಲೇ ಬಿಟ್ಟು ಹುಣಸೂರು ತಾಲೂಕಿನಲ್ಲಿರುವ ಲಕ್ಷ್ಮಣತೀರ್ಥ ನದಿಗೆ ಹಾರಿದ್ದರು.

ಇವರು ನದಿಗೆ ಹಾರಿದ್ದರ ಕುರಿತು ದಾರಿ ಹೋಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದ ವೇಳೆ ಆಟೋ, ಕೇಬಲ್ ಆಪರೇಟರ್ ಪುರುಷೋತ್ತಮ್​ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿತು. ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಬೋಟ್ ಮೂಲಕ ತಪಾಸಣೆ ನಡೆಸಿದರಾದರೂ ಶವ ಪತ್ತೆಯಾಗಿರಲಿಲ್ಲ.

ಪುರುಷೋತ್ತಮ ನದಿಗೆ ಹಾರುವ ಮುನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ನದಿಗೆ ಹಾರಿ ಸಾಯುತ್ತೇನೆಂದು ಹೇಳಿದ್ದರು. ಇದರಿಂದ ಆತಂಕಗೊಂಡು ಗ್ರಾಮದಲ್ಲಿ ಹಾಗೂ ನಗರದ ಸ್ನೇಹಿತರ ಅಂಗಡಿಗಳಲ್ಲಿ ವಿಚಾರಿಸಿದ್ದಾರೆ. ಕೊನೆಗೆ ಪುರುಷೋತ್ತಮ ಸಹೋದರ ತಾಪಂ ಮಾಜಿ ಸದಸ್ಯ ರವಿ ಪ್ರಸನ್ನರಿಗೆ ವಿಷಯ ಮುಟ್ಟಿಸಿ, ಹುಡುಕಾಟ ನಡೆಸಿದ ವೇಳೆ ಹೊಸ ಸೇತುವೆ ಬಳಿ ನಿಲ್ಲಿಸಿದ್ದ ಆಟೋ ಜೊತೆಗೆ ಜನ ಜಮಾಯಿಸಿರುವುದು ಕಂಡು ಬಂದಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಥಿಕವಾಗಿ ಸಾಕಷ್ಟು ಅನುಕೂಲಸ್ಥರಾಗಿರುವ ಪುರುಷೋತ್ತಮ್ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ದಿನಗಳ ಹುಡುಕಾಟದ ನಂತರ ಶವ ನದಿಯಲ್ಲಿ ಇಂದು ಪತ್ತೆಯಾಗಿದೆ.