ನಲ್ಗೊಂಡ(ತೆಲಂಗಾಣ): ಆರ್‌ಎಂಪಿ(ಗ್ರಾಮೀಣ ವೃತ್ತಿನಿರತ ವೈದ್ಯ) ವೈದ್ಯನೊಬ್ಬ ಪರಿಚಯಸ್ಥ ಮಹಿಳೆಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಮತ್ತು ಬೆರೆಸಿದ ಪಾನೀಯ ನೀಡಿ ಅತ್ಯಾಚಾರ ಎಸಗಿರುವ ಘಟನೆ ನಲ್ಗೊಂಡ ಜಿಲ್ಲೆಯ ಗುರ್ರಂಪೋಡು ಮಂಡಲದಲ್ಲಿ ಭಾನುವಾರ ನಡೆದಿದೆ. ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ವೈದ್ಯ ಮಹೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.

ವಿವರ: ಕೊಂಡಮಲ್ಲೆಪಲ್ಲಿ ಸಿಐ(ಸರ್ಕಲ್ ಇನ್ಸ್‌ಪೆಕ್ಟರ್) ನವೀನ್ ಕುಮಾರ್ ಮತ್ತು ಎಸ್‌ಐ(ಸಬ್ ಇನ್ಸ್‌ಪೆಕ್ಟರ್) ಮಧು ನೀಡಿದ ಮಾಹಿತಿ ಪ್ರಕಾರ, ಆರ್‌ಎಂಪಿ ವೈದ್ಯ ಮಹೇಶ್ ಗುರ್ರಂಪೋಡು ಮಂಡಲದ ಜುನೂತುಲ ಗ್ರಾಮದಲ್ಲಿ ಕಳೆದ ಆರು ವರ್ಷಗಳಿಂದ ಆಸ್ಪತ್ರೆ ನಡೆಸುತ್ತಿದ್ದಾರೆ. ಅದೇ ಗ್ರಾಮದ ವಿವಾಹಿತ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಮಿರಿಯಾಲಗುಡದಲ್ಲಿ ವಾಸಿಸುತ್ತಿದ್ದಾರೆ. ಭಾನುವಾರ ಮಹಿಳೆ ತಮ್ಮ ಊರಿಗೆ ಹೋಗಲು ಮಿರಿಯಾಲಗುಡದಲ್ಲಿ ಬಸ್ ಹತ್ತಿ ಮಲ್ಲೇಪಲ್ಲಿಗೆ ಬಂದಿದ್ದರು. ಅಲ್ಲಿಂದ ಜುನೂತುಲಗೆ ಹೋಗುವ ಬಸ್‌ಗಾಗಿ ಅವರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮಹೇಶ್ ಹಳೇ ಪರಿಚಯವಿದ್ದ ಕಾರಣ ಮಹಿಳೆ ಜೊತೆ ಮಾತು ಬೆಳೆಸಿ, ತಾನೂ ಜುನೂತುಲಗೆ ಹೋಗುತ್ತಿದ್ದೇನೆ ಎಂದು ಹೇಳಿ ಆಕೆಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ ಎಂದು ತಿಳಿಸಿದರು.
ಸಾಯಿಸಲು ಕೈಗಳಿಗೆ ಇಂಜೆಕ್ಷನ್ ಕೊಟ್ಟ ವೈದ್ಯ: ದಾರಿಮಧ್ಯೆ ಆಕೆಗೆ ಮತ್ತು ಬರುವ ಜೌಷಧಿ ಬೆರೆಸಿದ ಪಾನೀಯ ಕೊಟ್ಟದ್ದಾನೆ. ನಂತರ, ಮಹಿಳೆ ಅದನ್ನು ಕುಡಿದು ನಿದ್ದೆಗೆ ಜಾರಿದ್ದು, ಅತ್ಯಾಚಾರ ಎಸಗಿದ್ದಾನೆ. ನಂತರ ನಲ್ಗೊಂಡಕ್ಕೆ ಹೋಗಿ ಮಧ್ಯರಾತ್ರಿ 12 ಗಂಟೆಯವರೆಗೆ ಅಲ್ಲೇ ಇದ್ದು, ಜುನೂತುಲಗೆ ಹಿಂತಿರುಗಿದ್ದಾನೆ. ಆ ಸಮಯದಲ್ಲಿ, ಮಹಿಳೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಎರಡೂ ಕೈಗಳಿಗೆ ಔಷಧಿಯೊಂದನ್ನು ಇಂಜೆಕ್ಟ್ ಮಾಡಿದ್ದಾನೆ ಎಂದು ತಿಳಿಸಿದರು.
ಗುರ್ರಂಪೋಡುವಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಮಧ್ಯರಾತ್ರಿ ದೇವರಕೊಂಡ ಕಡೆಗೆ ಬರುತ್ತಿದ್ದ ಕಾರನ್ನು ಗಮನಿಸಿ, ಕುರಿ ಕಳ್ಳರಿರಬಹುದು ಎಂದು ಶಂಕಿಸಿ ಬೆನ್ನಟ್ಟಿದ್ದಾರೆ. ನಂತರ ವ್ಯಕ್ತಿಯೊಬ್ಬ ಕಾರಿನ ಲೈಟ್ ಆಫ್ ಮಾಡಿ ಮಹಿಳೆಯನ್ನು ಕಾರಿನಿಂದ ಹೊರಗೆ ತಳ್ಳಿರುವುದನ್ನು ಪೊಲೀಸರು ಗಮನಿಸಿದ್ದಾರೆ ಎಂದು ವಿವರಿಸಿದರು.
ಅಷ್ಟರಲ್ಲಾಗಲೇ ಮಹಿಳೆಯ ಬಾಯಿಂದ ನೊರೆ ಬರುತ್ತಿತ್ತು. ಸುತ್ತಮುತ್ತಲು ಪರಿಶೀಲಿಸಿದಾಗ ಮಹೇಶ್ ಇದ್ದಿದ್ದನ್ನು ಕಂಡು ವಶಕ್ಕೆ ಪಡೆದಿದ್ದಾರೆ. ನಂತರ, ಮಹಿಳೆಯನ್ನು ದೇವರಕೊಂಡ ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೈದರಾಬಾದ್ನ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಾರೆ. ಮೃತಳ ಪತಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮಹೇಶ್ನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಸಿಐ ನವೀನ್ ಕುಮಾರ್ ಮಾಹಿತಿ ನೀಡಿದರು.

