ಎನ್​ಒಸಿ ಇಲ್ಲದಿದ್ರೂ ಚಿನ್ನಸ್ವಾಮಿ ಸ್ಟೇಡಿಯಂಗೆ ಕರೆಂಟ್ ಕೊಟ್ಟಿದ್ದಕ್ಕೆ ʼಹೈಕೋರ್ಟ್ʼ ಅಸಮಾಧಾನ

ಬೆಂಗಳೂರು, ಜೂನ್​ 30: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಬೆಸ್ಕಾಂ ಕ್ರಮ ಪ್ರಶ್ನಿಸಿ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಅಗ್ನಿ ಸುರಕ್ಷತಾ ಎನ್​ಒಸಿ ಇಲ್ಲವೆಂದು ಬೆಸ್ಕಾಂ ಜೂ.16 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಬೆಸ್ಕಾಂನ ಈ ಕ್ರಮವನ್ನು ಪ್ರಶ್ನಿಸಿ ಕೆಎಸ್​ಸಿಎ ಅರ್ಜಿ ಸಲ್ಲಿಸಿದೆ. “ಅಗ್ನಿ ಮತ್ತು ತುರ್ತು ಸೇವೆಗಳ ಡಿಜಿಪಿಯವರು ನೀಡಿದ್ದ ನಿರ್ದೇಶನಗಳ ಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೂ, ಕೆಎಸ್​ಸಿಎ ನೀಡಿದ ಉತ್ತರ ಪರಿಗಣಿಸದೆ ವಿದ್ಯುತ್ ಕಡಿತ ಮಾಡಲಾಗಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಎನ್​ಒಸಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಈಗಾಗಲೇ ಆಗಿರುವ ಅನಾಹುತವೇ ಸಾಕಷ್ಟಾಗಿದೆ. ಮುಂದೆ ಅನಾಹುತವಾದರೆ ಅದಕ್ಕೆ ಯಾರು ಹೊಣೆ? ಪ್ರಭಾವಿಗಳು ಹೇಳಿದಾಕ್ಷಣ ಸಂಪರ್ಕ ನೀಡಿದರೆ ಸಹಿಸುವುದಿಲ್ಲ ಎಂದು ನ್ಯಾ. ಸುನೀಲ್ ದತ್ ಯಾದಬ್ ಅವರಿದ್ದ ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯ ಸರ್ಕಾರ, ಬೆಸ್ಕಾಂ, ಅಗ್ನಿ ಮತ್ತು ತುರ್ತು ಸೇವೆಗಳ ಡಿಜಿಪಿಗೆ ನೋಟಿಸ್ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ

ಇದೇ ತಿಂಗಳು ಜೂನ್​ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವಿಜಯ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ಈ ವೇಳೆ, ಕ್ರೀಡಾಂಗಣದ ಹೊರಗೆ ನೂಕುನುಗ್ಗಲು ಸಂಭವಿಸಿ 11 ಮಂದಿ ಆರ್​ಸಿಬಿ ಅಭಿಮಾನಿಗಳು ಮತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ. ಇನ್ನು ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.