ಶಾಲೆಗಳಲ್ಲಿ 1ರ ಬದಲಾಗಿ 5ನೇ ತರಗತಿಯಿಂದ ಹಿಂದಿ ಕಲಿಸಬೇಕು; ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್

ಪುಣೆ: ಮಹಾರಾಷ್ಟ್ರದ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು 1ನೇ ತರಗತಿಯಿಂದ ಪರಿಚಯಿಸುವ ಕ್ರಮಕ್ಕೆ ಉಪ ಮುಖ್ಯಮಂತ್ರಿ ಅಜಿತ್​ ಪವಾರ್​ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಐದನೇ ತರಗತಿಯಿಂದ ಕಲಿಸಬೇಕು ಎಂದು ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾಡಲಾಗಿದ ಅವರು, ಒಂದನೇ ತರಗತಿಯಿಂದ ಮರಾಠಿಯನ್ನು ಕಲಿಸಬೇಕು. ಆಗ ಅವರು ಚೆನ್ನಾಗಿ ಓದಲು ಮತ್ತು ಬರೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

1 ರಿಂದ 5 ನೇ ತರಗತಿಯವರೆಗಿನ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಲಾಗುವುದು ಎಂಬ ಕುರಿತು ಸರ್ಕಾರ ಕಳೆದ ವಾರ ತಿದ್ದುಪಡಿ ಆದೇಶ ಹೊರಡಿಸಿದ್ದು, ಅದು ವಿವಾದಕ್ಕೆ ಕಾರಣವಾಗಿದೆ.

ಸರ್ಕಾರ ಹಿಂದಿಯನ್ನು ಕಡ್ಡಾಯವಾಗಿ ಮಾಡಿಲ್ಲ. ಆದರೆ, ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಶೇ. 20ರಷ್ಟು ವಿದ್ಯಾರ್ಥಿಗಳು ಹಿಂದಿ ಹೊರತುಪಡಿಸಿ ಭಾರತದ ಯಾವುದಾದರೂ ಒಂದು ಭಾಷೆ ಕಲಿಯುವುದನ್ನು ಕಡ್ಡಾಯಗೊಳಿಸಿ ಅದೇಶ ನೀಡಿದೆ.

ಈ ವಿಚಾರ ಕುರಿತು ಮಾತನಾಡಿದ ಪವಾರ್​, ಈ ಕುರಿತು ನಿನ್ನೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ. 1ರಿಂದ 4ನೇ ತರಗತಿವರೆಗೆ ಹಿಂದಿಯನ್ನು ಪರಿಚಯಿಸಬಾರದು. ಐದನೇ ತರಗತಿಯಿಂದ ಇದನ್ನು ಪ್ರಾರಂಭಿಸಬೇಕು. 1ನೇ ತರಗತಿಯಿಂದ ವಿದ್ಯಾರ್ಥಿಗಳು ಮರಾಠಿಯನ್ನು ಕಲಿಯಬೇಕು. ಅದನ್ನು ಅವರು ಚೆನ್ನಾಗಿ ಓದಲು ಮತ್ತು ಬರೆಯಲು ತಿಳಿಯಬೇಕು ಎಂದರು. ಇದೇ ವೇಳೆ ಅವರು ಯಾರು ಕೂಡ ಯಾವುದೇ ಭಾಷೆ ಕಲಿಕೆಗೆ ಅಡ್ಡಿ ಮಾಡುವುದಿಲ್ಲ. ಆದರೆ, ಆರಂಭಿಕ ಹಂತದಲ್ಲಿ ಮತ್ತೊಂದು ಭಾಷೆಯ ಹೊರೆಯನ್ನು ಸಣ್ಣ ಮಕ್ಕಳ ಮೇಲೆ ಹೇರುವುದು ಸರಿಯಲ್ಲ ಎಂದು ಹೇಳಿದರು.

ಸಭ ಬಳಿಕ ಮಾತನಾಡಿದ ಸಿಎಂ ದೇವೇಂದ್ರ ಫಡ್ನಾವೀಸ್​, ತ್ರಿ ಭಾಷಾ ಸೂತ್ರದ ಕುರಿತು ಅಂತಿಮ ನಿರ್ಧಾರವನ್ನು ಸಾಹಿತಿಗಳು, ಭಾಷಾ ತಜ್ಞರು ಮತ್ತು ರಾಜಕೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕೈಗೊಳ್ಳಲಾಗುವುದು ಎಂದಿದ್ದಾರೆ.

ಒಂದನೇ ತರಗತಿಯಿಂದಲೇ ಹಿಂದಿ ಕಲಿಕೆಗೆ ನಟ ಸಯ್ಯಾಜಿ ಶಿಂಧೆ ಕೂಡ ವಿರೋಧಿಸಿ ಧ್ವನಿ ಎತ್ತಿದ್ದಾರೆ. ವಿದ್ಯಾರ್ಥಿಗಳು ಮರಾಠಿಯಲ್ಲಿ ಕಲಿಯಬೇಕು. ಇದು ಶ್ರೀಮಂತ ಭಾಷೆಯಾಗಿದ್ದು, ಬಾಲ್ಯದಲ್ಲೇ ಮರಾಠಿಯಲ್ಲಿ ಅವರು ಹಿಡಿತ ಹೊಂದಬೇಕು. ಈ ಸಮಯದಲ್ಲಿ ಮತ್ತೊಂದು ಭಾಷೆ ಹೊರೆ ಹೇರಬಾರದು. ಇದನ್ನು ಕಡ್ಡಾಯ ಮಾಡಬೇಕು ಎಂದಾದರೆ, ಐದನೇ ತರಗತಿ ಬಳಿಕ ಮಾಡಲಿ ಎಂದಿದ್ದಾರೆ.

ಶಿಂಧೆ ಅವರು ಮರಾಠಿ, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಅನೇಕ ಪ್ರಾದೇಶಿಕ ಚಿತ್ರಗಳಲ್ಲಿ ನಟಿಸಿದ್ದು, ತ್ರಿ ಭಾಷಾ ಸೂತ್ರದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.