ಜಾಗ್ರೆಬ್‌ನಲ್ಲಿ ಮೊಳಗಿದ ಗಾಯತ್ರಿ ಮಂತ್ರ; ಭಾರತೀಯ ಉಡುಗೆತೊಟ್ಟು ಮೋದಿಗೆ ಸ್ವಾಗತಕೋರಿದ ಕ್ರೊಯೇಷಿಯಾ ಪ್ರಜೆಗಳು

ಜಾಗ್ರೆಬ್‌: ಕೆನಡಾದ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ  ಅವರು ಬುಧವಾರ ಕ್ರೊಯೇಷಿಯಾದ ಜಾಗ್ರೆಬ್‌ಗೆ ಪ್ರವಾಸ ಬೆಳಸಿದ್ದಾರೆ. ಪ್ರಧಾನಿ ಮೋದಿಗೆ ಅಲ್ಲಿ ಆತ್ಮೀಯ ಸ್ವಾಗತ ದೊರೆಯಿತು. ಭಾರತೀಯ ಪ್ರಧಾನಿಯೊಬ್ಬರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಹೋಟೆಲ್‌ಗೆ ಆಗಮಿಸಿದಾಗ, ಪ್ರಧಾನಿ ಮೋದಿ ಅವರನ್ನು ವಂದೇ ಮಾತರಂ ” ಮತ್ತು ” ಭಾರತ್ ಮಾತಾ ಕಿ ಜೈ ” ಘೋಷಣೆಗಳೊಂದಿಗೆ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸ್ವಾಗತಿಸಲಾಯಿತು. ಕ್ರೊಯೇಷಿಯಾದ ಪ್ರಜೆಗಳು ಸಾಂಪ್ರದಾಯಕ ಉಡುಗೆಯನ್ನು ಧರಿಸಿದ್ದರು.

ಬಿಳಿ ಬಟ್ಟೆ ಧರಿಸಿದ ಕ್ರೊಯೇಷಿಯಾದ ಪ್ರಜೆಗಳ ಗುಂಪು ಪ್ರಧಾನಿ ಮೋದಿಯವರೊಂದಿಗೆ ‘ಗಾಯತ್ರಿ ಮಂತ್ರ’ ಮತ್ತು ಇತರ ಸಂಸ್ಕೃತ ಶ್ಲೋಕಗಳನ್ನು ಪಠಿಸಿತು, ಇದು ಭಾರತ ಮತ್ತು ಕ್ರೊಯೇಷಿಯಾ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಎತ್ತಿ ತೋರಿಸಿದೆ. ಪ್ರಧಾನಿ ಮೋದಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಭಾರತ ಹಾಗೂ ಕ್ರೊಯೇಷಿಯಾ ನಡುವೆ ಆಳವಾದ ಸಂಬಂಧವಿದೆ. ಭಾರತೀಯ ಸಂಸ್ಕೃತಿಗೆ ಇಷ್ಟೊಂದು ಗೌರವವಿದೆ ಎಂದು ನೋಡಿ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ಅವರು ಜಾಗ್ರೆಬ್‌ನಲ್ಲಿ ಎಲ್ಲರೊಟ್ಟಿಗೆ ಮಾತನಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಕ್ರೊಯೇಷಿಯಾದ ಭಾರತೀಯ ಸಮುದಾಯವು ಬಾಲ್ಕನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿದೆ ಮತ್ತು ಭಾರತದಲ್ಲಿನ ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. “ಜಾಗ್ರೆಬ್‌ನಲ್ಲಿ, ನಾನು ಭಾರತೀಯ ಸಮುದಾಯದ ಕೆಲವು ಸದಸ್ಯರೊಂದಿಗೆ ಸಂವಹನ ನಡೆಸಿದೆ, ಅವರು ನನಗೆ ಮರೆಯಲಾಗದ ಸ್ವಾಗತ ನೀಡಿದರು. ಈ ಭೇಟಿ ಮತ್ತು ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಹಿಂದೆಂದಿಗಿಂತಲೂ ಬಲಪಡಿಸುವಲ್ಲಿ ಅದರ ಪ್ರಭಾವದ ಬಗ್ಗೆ ಇಲ್ಲಿನ ಭಾರತೀಯ ಸಮುದಾಯದಲ್ಲಿ ಅಪಾರ ಉತ್ಸಾಹವಿದ ಎಂದು ಮೋದಿ ಹೇಳಿದ್ದಾರೆ.

ಕನನಾಸ್ಕಿಸ್‌ನಲ್ಲಿ ನಡೆದ 51 ನೇ ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆಯಲ್ಲಿ ಭಾಗವಹಿಸಿದ ಕೆನಡಾಕ್ಕೆ ತಮ್ಮ ಭೇಟಿ ಬಳಿಕ ಪ್ರಧಾನಿ ಮೋದಿ ತಮ್ಮ ಮೂರು ರಾಷ್ಟ್ರಗಳ ಭೇಟಿಯ ಕೊನೆಯ ಹಂತದಲ್ಲಿ ಕ್ರೊಯೇಷಿಯಾದ ರಾಜಧಾನಿ ಜಾಗ್ರೆಬ್‌ಗೆ ಆಗಮಿಸಿದರು. ಪ್ರವಾಸದ ಭಾಗವಾಗಿ ಅವರು ಇದಕ್ಕೂ ಮೊದಲು ಸೈಪ್ರಸ್‌ಗೆ ಭೇಟಿ ನೀಡಿದ್ದರು. ಕ್ರೊಯೇಷಿಯಾದ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಪ್ರಧಾನಿ ಮೋದಿ ದೇಶದ ನಾಯಕತ್ವದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮೊದಲು, 2021 ರಲ್ಲಿ COP-26 ನಲ್ಲಿ ಮತ್ತು ಅದೇ ವರ್ಷ ವರ್ಚುವಲ್ ಭಾರತ-ಯುರೋಪಿಯನ್ ಯೂನಿಯನ್ ನಾಯಕರ ಸಭೆಯ ಸಮಯದಲ್ಲಿ ಪ್ರಧಾನಿ ಮೋದಿ ಕ್ರೊಯೇಷಿಯಾದ ಪ್ರಧಾನಿಯೊಂದಿಗೆ ಸಂಕ್ಷಿಪ್ತವಾಗಿ ಸಂವಹನ ನಡೆಸಿದ್ದರು.