ಲವರ್ ಜತೆ ಸಿಕ್ಕಿಬಿದ್ದ ಹೆಂಡತಿಯ ಮೂಗು ಕಚ್ಚಿ ಕತ್ತರಿಸಿದ ಪತಿ

ಹಾರ್ದೋಯ್: ಹೆಂಡತಿ ಪ್ರಿಯಕರನೊಂದಿಗೆ ಆತ್ಮೀಯವಾಗಿ ಇದ್ದದ್ದನ್ನು ಕಣ್ಣಾರೆ ಕಂಡ ಗಂಡ ಆಕೆಯ ಮೂಗನ್ನು ಕಚ್ಚಿ ಬಿಸಾಡಿದ ವಿಕೃತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ(ಜೂ.18)ರಂದು 25 ವರ್ಷದ ಮಹಿಳೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಹೋಗಿದ್ದಳು. ಆಕೆಯ ಗಂಡ ರಾಮ್ ಖಿಲಾವನ್ ಆಕೆಯನ್ನು ಹಿಂಬಾಲಿಸಿಕೊಂಡು ಆ ವ್ಯಕ್ತಿಯ ಮನೆಗೆ ಹೋದನು. ಅಲ್ಲಿ ಹೆಂಡತಿ, ಪ್ರಿಯಕರನೊಂದಿಗೆ ಇದ್ದ. ಇದನ್ನು ಕಂಡ ಗಂಡನ ಸಿಟ್ಟು ನೆತ್ತಿಗೇರಿತ್ತು. ತಕ್ಷಣವೇ ಆತ ಹೆಂಡತಿಯೊಂದಿಗೆ ಜಗಳ ಶುರುಮಾಡಿದ. ಜಗಳದ ವೇಳೆ ಖಿಲಾವನ್ ತನ್ನ ಹೆಂಡತಿಯ ಮೂಗನ್ನು ಆಕೆಯ ಪ್ರಿಯಕರನ ಎದುರೇ ಕಚ್ಚಿ ಕತ್ತರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯ ಕೂಗಾಟ ಕೇಳಿ, ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ದೌಡಾಯಿಸಿದರು. ಒಳಗೆ ಕೆಲಸದಲ್ಲಿ ತಲ್ಲೀನರಾಗಿದ್ದ ಪ್ರಿಯಕರನ ಕುಟುಂಬಸ್ಥರು ಬೆಚ್ಚಿಬಿದ್ದು ಕೆಲಸ ಬಿಟ್ಟು ಓಡಿ ಬಂದರು. ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು, ನೋವಿನಿಂದ ನರಳುತ್ತಿದ್ದದ್ದನ್ನು ಕಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹರಿಯಾವನ್ ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡ ಮಹಿಳೆಯನ್ನು ಹರ್ದೋಯ್ ವೈದ್ಯಕೀಯ ಕಾಲೇಜಿಗೆ ಸಾಗಿಸಿದರು. ಆಕೆಯ ಸ್ಥಿತಿ ಹದಗೆಟ್ಟ ಕಾರಣ ಆಕೆಯನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಲಕ್ನೋದಲ್ಲಿರುವ ವೈದ್ಯಕೀಯ ಸೌಲಭ್ಯಕ್ಕೆ ಕಳುಹಿಸಿದರು.

ಆರೋಪಿ ಬಂಧನ, ವಿಚಾರಣೆ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಲ್ಲಾ ಆಯಾಮಗಳಿಂದ ಪ್ರಕರಣವನ್ನು ತನಿಖೆ ಮಾಡಲಾಗುತ್ತಿದೆ” ಎಂದು ಹೆಚ್ಚುವರಿ ಎಸ್ಪಿ ನರೇಂದ್ರ ಕುಮಾರ್ ಮಾಹಿತಿ ನೀಡಿದರು.