ಧುಬ್ರಿಯಲ್ಲಿ ಗೋವಿನ ತಲೆ ಪತ್ತೆ ಕೇಸ್ – 30ಕ್ಕೂ ಹೆಚ್ಚು ಜನ ಅರೆಸ್ಟ್‌

ದಿಸ್ಪುರ್:‌ ಅಸ್ಸಾಂನ ಧುಬ್ರಿಯಲ್ಲಿ ಇತ್ತೀಚೆಗೆ ಹಸುವಿನ ತಲೆ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಇನ್ನೂ ಲಖಿಂಪುರ ಜಿಲ್ಲೆಯಲ್ಲಿಯೂ ಇದೇ ರೀತಿಯ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ.

ಗುವಾಹಟಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧುಬ್ರಿಯಲ್ಲಿ ಹಸುವಿನ ತಲೆಪತ್ತೆಯಾದ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಲಖಿಂಪುರದಲ್ಲಿ, ನಾಮ್‌ಘರ್ (ವೈಷ್ಣವ ಪ್ರಾರ್ಥನಾ ಮಂದಿರ) ಮುಂದೆ ಮೂರು ಹಸುಗಳ ತಲೆಗಳನ್ನು ಇರಿಸಿದ್ದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಇದು ಗಂಭೀರ ವಿಚಾರವಾಗಿದ್ದು, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. 

ಒಂದು ನಿರ್ದಿಷ್ಟ ಸಮುದಾಯದ ಜನರು ಮಾತ್ರ ಈ ರೀತಿ ಗೋಮಾಂಸವನ್ನು ಇಟ್ಟುಕೊಳ್ಳುತ್ತಾರೆ. ಒಬ್ಬ ಹಿಂದೂ ಮಾಂಸವನ್ನು ಇಟ್ಟುಕೊಳ್ಳಲು ಬಯಸಿದರೆ, ಅವರು ಗೋಮಾಂಸವನ್ನಲ್ಲ, ಹಂದಿಮಾಂಸವನ್ನು ಇಟ್ಟುಕೊಳ್ಳುತ್ತಾರೆ. ಇನ್ನೂ ಈ ತರಹದ ವಿಚಾರಗಳು ರಾಹುಲ್ ಗಾಂಧಿಯವರ ವಿಷಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಇದೇ ವೇಳೆ ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ, ಬಾಂಗ್ಲಾದೇಶ ಬೆಂಬಲಿತ ಸಂಘಟನೆಯಾದ ನೋಬಿನ್ ಬಾಂಗ್ಲಾ, ಧುಬ್ರಿ ದೇಶದ ಭಾಗವಾಗಬೇಕೆಂದು ಒತ್ತಾಯಿಸಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಹಾಕಿದ್ದರು. ಈ ಪೋಸ್ಟರ್‌ಗಳು ಧುಬ್ರಿಯಲ್ಲಿ ಬಾಂಗ್ಲಾದೇಶ ಬೆಂಬಲಿತ ಕೋಮುವಾದಿ ಗುಂಪು ಸಕ್ರಿಯವಾಗಿದೆ. ಧುಬ್ರಿಯಲ್ಲಿ ಈದ್ ಅಲ್-ಅಧಾ ಹಬ್ಬಕ್ಕೂ ಮುನ್ನ ಸಾವಿರಾರು ಪ್ರಾಣಿಗಳನ್ನು ಖರೀದಿಸಲಾಗಿದೆ. ಇದು ಹೊಸ ʻಗೋಮಾಂಸ ಮಾಫಿಯಾʼ ಹುಟ್ಟಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹೇಳಿಕೆಗಳನ್ನು ವಿರೋಧ ಪಕ್ಷಗಳ ನಾಯಕರು ಬಲವಾಗಿ ಟೀಕಿಸಿದ್ದಾರೆ. ಅಸ್ಸಾಂನಲ್ಲಿ ಈಗಾಗಲೇ ಕೋಮು ಉದ್ವಿಗ್ನತೆ ಹೆಚ್ಚಾಗಿದೆ. ಈ ಸಮಯದಲ್ಲಿ ಅವರ ಹೇಳಿಕೆಗಳು ಪ್ರಚೋದನಕಾರಿಯಾಗಿವೆ ಎಂದು ಕಿಡಿಕಾರಿದ್ದಾರೆ.

ಕಳೆದ ವಾರ ಧುಬ್ರಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಈ ವೇಳೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ಹೊರಡಿಸಲಾಗಿತ್ತು.