ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಆತಂಕ: ತಜ್ಞರ ತಂಡ ಹೇಳಿದ್ದೇನು?

ಭಾರಿ ಮಳೆಯಿಂದ ಉ.ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತ ಸಂಭವಿಸುತ್ತಿರುವ ಕಾರಣ, ಸೂಕ್ಷ್ಮ ಪ್ರದೇಶಗಳಿಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ತಂಡ ನೀಡಿರುವ ಎಚ್ಚರಿಕೆ ಏನು? ಉತ್ತರ ಕನ್ನಡ ಜಿಲ್ಲೆಯ ಯಾವ ಪ್ರದೇಶಗಳ ಜನ ಎಚ್ಚರಿಕೆ ವಹಿಸಬೇಕು? ಮಾಹಿತಿ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ತುಸು ಕಡಿಮೆಯಾಗಿದ್ದರೂ, ಅನೇಕ ಕಡೆಗಳಲ್ಲಿ ಭೂಕುಸಿತದ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ ಶಿರೂರಿನಲ್ಲಿ ಸಂಭವಿಸಿದ್ದ ಭೂಕುಸಿತದ ಕಹಿನೆನಪಿನಿಂದಲೇ ಜಿಲ್ಲೆಯ ಜನ ಇನ್ನೂ ಹೊರಬಂದಿಲ್ಲ. ಅಂಥದ್ದರಲ್ಲಿ ಈ ವರ್ಷ ಕೂಡ ಅನೇಕ ಕಡೆಗಳಲ್ಲಿ ಭೂಕುಸಿತ, ಗುಡ್ಡಕುಸಿತ ಸಂಭವಿಸಿವೆ. ಹೀಗಾಗಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಬಿಡು ಬಿಟ್ಟಿದೆ. ಕಾರವಾರ ತಾಲೂಕಿನಲ್ಲಿ ನಾಲ್ಕು ಕಡೆ ಗುಡ್ಡ ಕುಸಿತ ಆಗಿತ್ತು. ಹೀಗಾಗಿ ಕೆಲವೆಡೆ ಜನರನ್ನು ಸ್ಥಳಾಂತರಿಸಿದ್ದರೆ, ಇನ್ನು ಕೆಲವೆಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು.

ಕಾರವಾರ ತಾಲೂಕಿನ ಬಹುತೇಕ ಕಡೆ ಜನರು ಗುಡ್ಡ ಕುಸಿತದ ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೀಗ ತಜ್ಞರು ಹೇಳಿದ್ದಾರೆ. ಕಾರವಾರ ನಗರದ ಹಬುವಾಡ ಪ್ರದೇಶದ ಮನೆಗಳಲ್ಲಿ ಜನ ನೆಲೆಸಬಹುದು. ಅಲ್ಲಿ ಗುಡ್ಡ ಜಾಸ್ತಿ ಕುಸಿದರೂ ಮನೆಗಳಿಗೆ ಹೆಚ್ಚಿನ ಹಾನಿ ಆಗಲ್ಲ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಸುರಂಗ ಬಳಿ ಗುಡ್ಡ ಕುಸಿಯುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ.

ಶಿರಸಿ ತಾಲೂಕಿನ ದೇವಿಮನೆ ಘಟ್ಟದಲ್ಲಿ ಮಾತ್ರ ಮುನ್ನೆಚ್ಚರಿಕೆ ವಹಿಸಲು ತಜ್ಞರು ಸೂಚನೆ ನೀಡಿದ್ದಾರೆ. ದೇವಿಮನೆ ಘಟ್ಟಭಾಗದ 7 ಕಿ.ಮೀ ಅಂತರದಲ್ಲಿ ಐದು ಬಾರಿ ಗುಡ್ಡ ಕುಸಿತ ಆಗಿದೆ. ಗುಡ್ಡ ಕುಸಿತ ಆಗುತ್ತಿರುವ ಸ್ಥಳದಲ್ಲಿನ ಹೆಚ್ಚಿನ ಮಣ್ಣನ್ನು ತೆಗೆಯದಂತೆ ತಜ್ಞರು ಸಲಹೆ ನೀಡಿದ್ದಾರೆ. ದೇವಿಮನೆ ಘಟ್ಟದ ಮೂಲಕ ಹಾದುಹೋಗುವ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯನ್ನು ರಾತ್ರಿ ಹೊತ್ತು ಬಂದ್ ಮಾಡುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ. ಈ ರಸ್ತೆಯಲ್ಲಿ ಕಳೆದ 2 ವಾರದ ಅವಧಿಯಲ್ಲಿ ಕೆಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ.

ಒಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಗೆ ಸಾಕಷ್ಟು ಅವಾಂತರಗಳಾಗಿದೆ. ಇನ್ನೂ ಹಲವು ಕಡೆಗಳಲ್ಲಿ ಭೂಕುಸಿತವಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಿರುವ ತಜ್ಞರು ಕೆಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಮಾಹಿತಿ ನೀಡಿದ್ದಾರೆ..