ಗೋಕರ್ಣ: ಖಡ್ಗಕ್ಕೆ ನಡುಗದ ಪಾಪಿಯ ಹೃದಯ ಕರುಣೆಯಿಂದ ಕರಗುತ್ತದೆ. ಕರುಣೆಯಿಂದ ಕ್ರೌರ್ಯವನ್ನು ಗೆದ್ದ ನಿದರ್ಶನಗಳು ಸಾಕಷ್ಟಿವೆ. ಆದ್ದರಿಂದಲೇ ಕರುಣೆ ಶ್ರೇಷ್ಠ ಭಾವ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ಕರುಣೆಯ ಶಕ್ತಿ ಖಡ್ಗಕ್ಕಿಂತಲೂ ಹೆಚ್ಚು ಎಂದು ವಿಶ್ಲೇಷಿಸಿದರು. ರಾಮ, ಸೀತೆ, ಹನುಮಂತನ ಗುಣ ಬೆಳೆಸಿಕೊಳ್ಳಬೇಕೆಂದರೆ, ದೇಹದಲ್ಲಿ ರಕ್ತ ಹರಿಯುವಂತೆ ಕರುಣೆ ಎಲ್ಲೆಡೆ ತುಂಬಿ ಹರಿಯಬೇಕು. ಜಗತ್ತಿನ ಪ್ರತಿಯೊಬ್ಬರ ಬಗ್ಗೆಯೂ ಕರುಣೆ ತೋರುವ ಮನಸ್ಸು ಬೆಳೆಸಿಕೊಳ್ಳೋಣ ಎಂದು ಹೇಳಿದರು.
ಸತ್ಪುರುಷರು, ಕರುಣಾಪೂರ್ಣರು, ಸಾಮಾನ್ಯರು ತಮ್ಮ ಸ್ವಾರ್ಥ ಸಾಧಿಸಿ ಬೇರೆಯವರ ಬಗ್ಗೆ ಕರುಣೆ ತೋರುತ್ತಾರೆ. ಆದರೆ ಮಾನುಷ ರಾಕ್ಷಸರು ತಮ್ಮ ಹಿತಕ್ಕಾಗಿ ಪರಹಿತವನ್ನು ಕಿತ್ತುಕೊಳ್ಳುವಂತವರು. ಕೊನೆಯ ವರ್ಗ ಕರುಣೆಯ ಸುಳಿವೇ ಇಲ್ಲದವರು. ಇವರು ಕೊನೆಗೆ ಹೇಳ ಹೆಸರಿಲ್ಲದಂತೆ ನಾಶವಾಗಿ ಬಿಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.
ತಾಟಕಿಯನ್ನು ಹತ್ಯೆ ಮಾಡುವಂತೆ ವಿಶ್ವಾಮಿತ್ರರು ಸೂಚಿಸಿದರೂ, ಹೆಣ್ಣು ಎಂಬ ಕಾರಣಕ್ಕೆ ರಾಮ ಕರುಣೆ ತೋರುತ್ತಾನೆ. ರಾಕ್ಷಸಿಯಾದರೂ, ಸ್ತ್ರೀಯೆಂಬ ಕಾರಣಕ್ಕೆ ಕರುಣೆ ತೋರಿದ ನಿದರ್ಶನ ರಾಮ ಎಷ್ಟು ಕರುಣಾಮೂರ್ತಿ ಎನ್ನುವುದನ್ನು ಸೂಚಿಸುತ್ತದೆ. ಶುಕ-ಸಾರಣರೆಂಬ ರಾವಣನ ಗುಪ್ತಚರರು ರಾಮಸೈನ್ಯದ ಅವಲೋಕನ ಮಾಡುವ ವೇಳೆ ಕಪಿಸೈನ್ಯದ ಕೈಯಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ರಾಜದೂತನನ್ನು ಹತ್ಯೆ ಮಾಡುವುದು ರಾಜನೀತಿಗೆ ವಿರುದ್ಧ ಎಂದು ರಾಮ ಬಿಟ್ಟು ಬಿಡುತ್ತಾನೆ. ಇದು ರಾಮ ಕಾರುಣ್ಯದ ಮತ್ತೊಂದು ಮುಖ ಎಂದರು.
ಅಶೋಕವನದಲ್ಲಿ ಸೀತೆಗೆ ಒಂದು ವರ್ಷ ಚಿತ್ರಹಿಂಸೆ ನೀಡಿದ ರಕ್ಕಸಿಯರನ್ನು ಹತ್ಯೆ ಮಾಡಲು ಹನುಮಂತ ಮುಂದಾದಾಗ ಸೀತೆ, ತಪ್ಪನ್ನೇ ಮಾಡದವರು ಯಾರೂ ಇಲ್ಲ. ಬದುಕಿನ ಪ್ರತಿ ಹಂತದಲ್ಲೂ ಒಂದಲ್ಲ ಒಂದು ತಪ್ಪು ಮಾಡಿರುತ್ತಾನೆ. ಹಾಗಿರುವಾಗ ಅವರ ಮೇಲೇಕೆ ಹಗೆ? ಆರ್ಯನಾದವನು ಅವರನ್ನು ಹತ್ಯೆ ಮಾಡಬಾರದು ಎನ್ನುತ್ತಾಳೆ. ಇದು ಸೀತೆಯ ಕಾರುಣ್ಯ. ಇದು ರಾಮ-ಸೀತೆಯರಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ವಾಲ್ಮೀಕಿ ಬಣ್ಣಿಸಿದ್ದಾರೆ ಎಂದರು.
ಅಂತೆಯೇ ಹನುಮಂತ ಲಂಕೆಗೆ ಪ್ರವೇಶಿಸುವ ವೇಳೆ ಲಂಕಿಣಿ ಎದುರಾಗಿ ಪ್ರಹಾರ ಮಾಡಿದಾಗ ಪ್ರತಿಯಾಗಿ ಹನುಮಂತ ಎಡಗೈಯ ಮೆದು ಮುಷ್ಟಿಯಿಂದ ಹೊಡೆಯುತ್ತಾನೆ. ಆಗ ಲಂಕಿಣಿ ನೆಲಕ್ಕೆ ಬೀಳುತ್ತಾಳೆ. ಹನುಮಂತ ಹೆಣ್ಣೆಂಬ ಕಾರಣಕ್ಕೆ ಕರುಣೆ ತೋರುತ್ತಾನೆ. ಹೀಗೆ ಮಹಾಪುರುಷರು ಎಂಥ ಸಂದಿಗ್ಧ ಸ್ಥಿತಿಯಲ್ಲೂ ವಿರೋಧಿಗಳ ಮೇಲೂ ಕರುಣೆ ತೋರಿದ ಹಲವು ನಿದರ್ಶನಗಳು ರಾಮಾಯಣದಲ್ಲಿ ಕಂಡುಬರುತ್ತವೆ ಎಂದು ವಿಶ್ಲೇಷಿಸಿದರು.
ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳನ್ನು ಗುರುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಗೌರವಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಧಾರ್ಮಿಕ ವಿಭಾಗದ ಸಂಚಾಲಕ ಭಾನುಪ್ರಕಾಶ್ ಶ್ರೀರಂಗಪಟ್ಟಣ, ಉಪಾಧ್ಯಕ್ಷ ಶಶಿಭೂಷಣ ಹೆಗಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಪಾದ ರಾಯಸದ, ನಾರಾಯಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ಗಣಪತಿ ಹೋಮ, ಪವಮಾನ ಹೋಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊನ್ನಾವರದ ಹೊಸಾಕುಳಿ ಶ್ರೀ ಮಹಾಗಣಪತಿ ಯಕ್ಷಕಲಾ ವೃಂದ ವತಿಯಿಂದ ಲವ-ಕುಶ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು