
ಅಹಮದಾಬಾದ್: ಇಲ್ಲಿನ ಮೇಘನಿ ನಗರದಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಮೂರು ದಿನಗಳ ನಂತರ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮೃತದೇಹದ ಗುರುತು ಪತ್ತೆಯಾಗಿದೆ. ಅಪಘಾತ ಸ್ಥಳದಲ್ಲಿ ಪತ್ತೆಯಾದ ಮೃತದೇಹದೊಂದಿಗೆ ಡಿಎನ್‌ಎ ಮ್ಯಾಚ್ ಆಗಿದ್ದು, ಮೃತದೇಹ ಹಸ್ತಾಂತರಕ್ಕೆ ತಯಾರಿ ನಡೆದಿದೆ.
ಈ ಕುರಿತು ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ 11:10ಕ್ಕೆ ಬಂದ ಡಿಎನ್‌ಎ ವರದಿಯಲ್ಲಿ ರೂಪಾನಿ ಅವರ ಡಿಎನ್‌ಎಗೆ ಮ್ಯಾಚ್ ಆಗಿದೆ ಎಂದು ತಿಳಿಸಿದ್ದಾರೆ.
ರೂಪಾನಿ ಅವರ ಸಹೋದರಿಯಿಂದ ಸ್ಯಾಂಪಲ್ ಪಡೆದು ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಡಿಎನ್‌ಎ ಮಾಚ್ ಆಗಿದ್ದು ಮೂರು ದಿನಗಳ ಬಳಿಕ ಮೃತದೇಹದ ಗುರುತು ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಅವರು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಬಂದ ಬಳಿಕ ಮೃತದೇಹ ಹಸ್ತಾಂತರಿಸಲಾಗುತ್ತದೆ. ಹಾಲಿ ಸಿಎಂ ಭೂಪೇಂದ್ರ ಪಟೇಲ್ ಸಹ ಕುಟುಂಬಸ್ಥರೊಂದಿಗೆ ಇರಲಿದ್ದಾರೆ.
ರಾಜಕೋಟ್‌ನಲ್ಲಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ.
ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಶನಿವಾರದವರೆಗೆ 31 ಮೃತ ದೇಹಗಳ ಡಿಎನ್‌ಎ ಮ್ಯಾಚ್ ಆಗಿದ್ದು, 12 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಇಂದು ಇನ್ನಷ್ಟು ಮೃತದೇಹಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.



