
2023-25ರ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಆರಂಭವಾಗಿದೆ. ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡ ಎಂಬ ದಾಖಲೆ ಬರೆಯುವ ಇರಾದೆಯೊಂದಿಗೆ ಆಸ್ಟ್ರೇಲಿಯಾ ತಂಡ ಕಣಕ್ಕಿಳಿಯುತ್ತಿದ್ದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ಪ್ರಶಸ್ತಿ ಎತ್ತಿಹಿಡಯುವ ತವಕದಲ್ಲಿದೆ. ಹೀಗಾಗಿ ಉಭಯ ತಂಡಗಳು ಕೂಡ ತಮ್ಮ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಕಟ್ಟಿಕೊಂಡು ಬಹಳ ದಿನಗಳಿಂದ ಅಭ್ಯಾಸದಲ್ಲಿ ನಿರತವಾಗಿವೆ. ಉಭಯ ತಂಡಗಳಲ್ಲೂ ಪಂದ್ಯವನ್ನು ತಿರುಗಿಸಬಲ್ಲ ಆಟಗಾರರಿರುವ ಕಾರಣ ಈ ಫೈನಲ್ ಪಂದ್ಯ ಮತ್ತಷ್ಟು ರೋಚಕತೆ ಹೆಚ್ಚಿಸಿದೆ. ಇನ್ನು ಈ ಫೈನಲ್ ಪಂದ್ಯದ ಟಾಸ್ ನಡೆದಿದ್ದು, ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.
ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್
ಟಾಸ್ ಸೋತ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಟಾಸ್ ಗೆದ್ದಿದ್ದರೆ ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿದರು. ಡೇವಿಡ್ ವಾರ್ನರ್ ನಿವೃತ್ತಿಯ ಬಳಿಕ ಆಸ್ಟ್ರೇಲಿಯಾದ ಆರಂಭಿಕ ಜೋಡಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದೀಗ ಫೈನಲ್ ಪಂದ್ಯದಲ್ಲೂ ಆರಂಭಿಕ ಜೋಡಿ ಬದಲಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಮಾರ್ನಸ್ ಲಬುಶೇನ್, ಉಸ್ಮಾನ್ ಖವಾಜಾ ಜೊತೆ ಓಪನಿಂಗ್ ಮಾಡಲಿದ್ದಾರೆ. ಲಬುಶೇನ್ ಅವರ ಫಾರ್ಮ್ ತಂಡಕ್ಕೆ ಕಳವಳಕಾರಿ ವಿಷಯವಾಗಿದೆಯಾದರೂ, ತಂಡದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕೌಂಟಿ ಕ್ರಿಕೆಟ್‌ನಲ್ಲಿ ಮೂರು ಶತಕಗಳನ್ನು ಬಾರಿಸುವ ಮೂಲಕ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯಾದ ಬೌಲಿಂಗ್‌ನಲ್ಲಿ ಅನುಭವದ ಕೊರತೆಯಿಲ್ಲ. ತಂಡವು ಆಸ್ಟ್ರೇಲಿಯಾದ ಸಾರ್ವಕಾಲಿಕ ಟಾಪ್ 10 ವಿಕೆಟ್ ಪಡೆದವರ ನಾಲ್ವರು ಬೌಲರ್‌ಗಳನ್ನು ಒಳಗೊಂಡಿದೆ. ಅವರಲ್ಲಿ ನಾಥನ್ ಲಿಯಾನ್ (553, ಮೂರನೇ), ಮಿಚೆಲ್ ಸ್ಟಾರ್ಕ್ (382, ನಾಲ್ಕನೇ), ನಾಯಕ ಪ್ಯಾಟ್ ಕಮ್ಮಿನ್ಸ್ (294, ಎಂಟನೇ) ಮತ್ತು ಹೇಜಲ್‌ವುಡ್ (279, 10ನೇ) ಸೇರಿದ್ದಾರೆ.
ಆಫ್ರಿಕಾಗೆ ಬೌಲರ್ಗಳೇ ಜೀವಾಳ
ಇತ್ತ ದಕ್ಷಿಣ ಆಫ್ರಿಕಾ ತಂಡ ಅನುಭವಿಗಳು ಮತ್ತು ಯುವ ಆಟಗಾರರಿಂದ ತುಂಬಿದೆ. ಅಲ್ಲದೆ ಸತತ ಏಳು ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಬವುಮಾ, ಅನುಭವಿ ಐಡೆನ್ ಮಾರ್ಕ್ರಾಮ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ತಂಡಕ್ಕೆ ಬಲ ತುಂಬಿದರೆ, ಬೌಲಿಂಗ್ ವಿಭಾಗದಲ್ಲಿ ಅನುಭವಿ ಕಗಿಸೋ ರಬಾಡಗೆ ಮಾರ್ಕೊ ಯಾನ್ಸೆನ್ ಸಾಥ್ ನೀಡಲಿದ್ದಾರೆ. ದಕ್ಷಿಣ ಆಫ್ರಿಕಾ ಪರ ಆಡಮ್ ಮಾರ್ಕ್ರಾಮ್ ಮತ್ತು ರಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಲಿದ್ದು, ನಾಯಕ ಬವುಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಉಭಯ ತಂಡಗಳು
ಆಸ್ಟ್ರೇಲಿಯಾದ ಪ್ಲೇಯಿಂಗ್-11: ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಕ್ಯಾಮರೂನ್ ಗ್ರೀನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹೇಜಲ್‌ವುಡ್.
ದಕ್ಷಿಣ ಆಫ್ರಿಕಾದ ಪ್ಲೇಯಿಂಗ್-11: ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ರಯಾನ್ ರಿಕಲ್ಟನ್, ವಿಯಾನ್ ಮುಲ್ಡರ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಬೆಡಿಂಗ್‌ಹ್ಯಾಮ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ.
