ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ವಿಶ್ವನಾಥ ಬೇವಿನಕಟ್ಟಿರವರಿಗೆ 2025ರ ‘ಕರ್ನಾಟಕ ಯುವರತ್ನ ಪ್ರಶಸ್ತಿ’

ಕುಮಟಾ: ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್ ಶಿಕ್ಷಕ ವಿಶ್ವನಾಥ ಪಿ ಬೇವಿನಕಟ್ಟಿ ರವರಿಗೆ ರಾಜ್ಯಮಟ್ಟದ ‘ಕರ್ನಾಟಕ ಯುವ ರತ್ನ’ ಪ್ರಶಸ್ತಿ ಮುಡಿಗೇರಿದೆ. ಕರ್ನಾಟಕ ಪ್ರೆಸ್‌ಕ್ಲಬ್ ಬೆಂಗಳೂರು ಇವರ ವತಿಯಿಂದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿ ಇದಾಗಿದೆ.

ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡದ ಮನೆ ಮಗ ಕನ್ನಡ ಕುಲ ಕೋಟಿಯ ಆರಾಧ್ಯ ದೈವ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ೫೦ ನೇ ಜನ್ಮದಿನಾಚರಣೆಯ ನಿಮಿತ್ತ ಕರ್ನಾಟಕ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಶ್ವನಾಥರ ವೃತ್ತಿಪರ ಘನತೆ, ಸಾಮಾಜಿಕ ಜವಬ್ದಾರಿ, ಆದರ್ಶ ಬದುಕು ಸಾಮಾಜಿಕ ಚಿಂತನೆಗಾಗಿ ಶಿಕ್ಷಣ ಕ್ಷೇತ್ರದಲ್ಲಿ’ ೨೦೨೫ರ ಕರ್ನಾಟಕ ಯುವರತ್ನ ಪ್ರಶಸ್ತಿಯನ್ನು ಗಣ್ಯರ ಅಮೃತ ಹಸ್ತದಿಂದ ಗೌರವಿತವಾಗಿ ಸನ್ಮಾನಿಸಿ ಅಭಿನಂದಿಸಲಾಗಿದೆ.

ವಿಶ್ವನಾಥ ಬೇವಿನಕಟ್ಟಿ ಹಿರೇಗುತ್ತಿ ಹೈಸ್ಕೂಲಿನಲ್ಲಿ ಕಳೆದ ೨೧ ವರ್ಷಗಳಿಂದ ಇಂಗ್ಲೀಷ್ ವಿಷಯದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಕ್ರೀಡಾಪಟುವಾಗಿರುವ ಇವರು ಹೈಸ್ಕೂಲಿನ ಕ್ರೀಡಾಪಟುಗಳಿಗೆ ಪ್ರತಿವರ್ಷ ಕಬಡ್ಡಿ ಕ್ರೀಡೆಯಲ್ಲಿ ತರಬೇತಿ ನೀಡಿ ಹೈಸ್ಕೂಲ್ ವಿದ್ಯಾರ್ಥಿಗಳು ಕ್ರೀಡಾ ಕಬಡ್ಡಿ ವಿಭಾಗದಲ್ಲಿ ತಾಲೂಕಾ, ಜಿಲ್ಲಾಮಟ್ಟದವರೆಗೆ ಸಾಧನೆ ಮಾಡುವಂತೆ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಶಾಲೆಯಲ್ಲಿ ಸರಳ ಬೋಧನೆಯೊಂದಿಗೆ ಇಂಗ್ಲೀಷ್ ಮತ್ತು ಸಮಾಜವಿಜ್ಞಾನ ವಿಷಯವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಬೋಧಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಶಾಲೆಯ ಭೌತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮದೇ ಕೊಡುಗೆಯನ್ನು ನೀಡುತ್ತಾ ವಿದ್ಯಾರ್ಥಿಗಳ ಮನದಲ್ಲಿ ನೆಲೆಯಾಗಿದ್ದಾರೆ.

ಪ್ರಶಸ್ತಿಗೆ ಭಾಜನರಾದ ವಿಶ್ವನಾಥ ಬೇವಿನಕಟ್ಟಿರವರನ್ನು ಸೆಕೆಂಡರಿ ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ಹಾಗೂ ಸರ್ವ ಸದಸ್ಯರು, ಶಿಕ್ಷಕ-ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ