ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆ: ಕುಸಿದ ರಸ್ತೆ, ಬೆಳಗಾವಿ – ಗೋವಾ ಸಂಚಾರ ಬಂದ್!

ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಇದರಿಂದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು, ಬೆಳಗಾವಿ – ಗೋವಾ ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಲಪ್ರಭಾ ನದಿ ಉಗಮವಾಗುತ್ತದೆ. ಕುಸಮಳಿ ಗ್ರಾಮದ ಬಳಿ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ತಾತ್ಕಾಲಿಕವಾಗಿ ಓಡಾಡಲು ರಸ್ತೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ, ಏಕಾಏಕಿ ನೀರು ಹೆಚ್ಚಳವಾದ ಹಿನ್ನೆಲೆ ಆ ರಸ್ತೆ ಕೊಚ್ಚಿಕೊಂಡು ಹೋಗಿದೆ.

ಬೆಳಗಾವಿಯಿಂದ ಜಾಂಬೋಟಿ, ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಹಳೆ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ನದಿಯಲ್ಲಿಯೇ ಮಣ್ಣಿನ ರಸ್ತೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ, ನೀರಿನ ಹರಿವು ಹೆಚ್ಚಳ ಆಗಿದ್ದರಿಂದ ರಸ್ತೆಯು ಕೊಚ್ಚಿ ಹೋಗಿದೆ. ಹಾಗಾಗಿ, ಈ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದು, ಮಳೆಗಾಲ ಮುಗಿಯುವವರೆಗೂ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.

ಬೆಳಗಾವಿಯಿಂದ ಖಾನಾಪುರ, ರಾಮನಗರ ಮಾರ್ಗವಾಗಿ ಗೋವಾಕ್ಕೆ ಪ್ರಯಾಣಿಕರು ಸದ್ಯ ಸಂಚರಿಸುತ್ತಿದ್ದಾರೆ. ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಸೇತುವೆ ಮುಕ್ತಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.