ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್, ನಾಳೆ ದೆಹಲಿಗೆ ಸಿಎಂ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಲಿರುವ ಸಿದ್ದರಾಮಯ್ಯ ಅವರು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರ ನೀಡಲಿದ್ದಾರೆ. ಕಾಲ್ತುಳಿತ ಸುತ್ತ ಎದ್ದಿರುವ ಗೊಂದಲ, ಆರೋಪಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿದ್ದಾರೆ. ಈಗಾಗಲೇ ಆರ್​​ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿದೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ವಿಜಯೋತ್ಸವಕ್ಕೆ ಅನುಮತಿ ನೀಡಿರುವ ಬಗ್ಗೆ ಪ್ರತಿಪಕ್ಷಗಳು ಗಂಭೀರ ಆರೋಪ ಮಾಡುತ್ತಿವೆ.

ಇತ್ತ ವಿಧಾನಸೌಧದಲ್ಲಿ ಆರ್​​ಸಿಬಿ ತಂಡದ ಸನ್ಮಾನದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಭದ್ರತಾ ವ್ಯವಸ್ಥೆ ಮಾಡದೇ ಆತುರ ಆತುರವಾಗಿ ವಿಜಯೋತ್ಸವ ನಡೆಸಲು ಅನುವು ಮಾಡಿಕೊಟ್ಟ ಸರ್ಕಾರದ ನಡೆಗೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರ ಎದುರಿಸುತ್ತಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ವಿವರಣೆ ನೀಡಲಿದ್ದಾರೆ.

ಎಂಎಲ್​​ಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ: ಇದೇ ವೇಳೆ ಸಿಎಂ ಸಿದ್ದರಾಮಯ್ಯ ಲಿಸ್ಟ್ ಮಾಡಿದ್ದ ಖಾಲಿ ಇರುವ ಎಂಎಲ್​​ಸಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ.‌ ಸಿಎಂ ಸಿದ್ದರಾಮಯ್ಯ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಮಾಡಿದ್ದು, ಅದಕ್ಕೆ ಹೈ ಕಮಾಂಡ್ ಬ್ರೇಕ್ ಹಾಕಿದೆ. ರಾಜ್ಯಪಾಲರಿಗೆ ಶಿಫಾರಸು ಮಾಡದಂತೆ ಸಿಎಂಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ವರ ಆಯ್ಕೆ ಬಗ್ಗೆ ಪಕ್ಷದ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೈಕಮಾಂಡ್​​ಗೆ ಆಯ್ಕೆ ಪಟ್ಟಿ ಸಂಬಂಧ ಕೈ ಹಿರಿಯ ನಾಯಕರು ಆಕ್ಷೇಪಣೆಯ ದೂರು ರವಾನಿಸಿದ್ದರು. ರಾಜ್ಯ ನಾಯಕರ ಒತ್ತಡಕ್ಕೆ ಮಣಿದ ಹೈಕಮಾಂಡ್, ನಾಲ್ವರು ಅಭ್ಯರ್ಥಿಗಳ ಆಯ್ಕೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ.

ವಿಧಾನ ಪರಿಷತ್​​ಗೆ ಆರತಿ ಕೃಷ್ಣ, ರಮೇಶ್ ಬಾಬು, ಡಿ.ಜಿ. ಸಾಗರ್, ದಿನೇಶ್ ಅಮಿನಮಟ್ಟು ಹೆಸರನ್ನು ಶಿಫಾರಸು ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದರು. ನಾಲ್ವರ ಹೆಸರನ್ನು ಫೈನಲ್ ಮಾಡಿದ್ದರು. ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನಾಲ್ವರ ಹೆಸರನ್ನು ಅಂತಿಮಗೊಳಿಸಿದ್ದರು. ಈ ಕುರಿತು ಸಹ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ.