RCB ಗೆಲುವಿನ ಸಂಭ್ರಮಾಚರಣೆ ದುರಂತದಲ್ಲಿ ಉಸಿರು ನಿಲ್ಲಿಸಿದ ಸಿದ್ದಾಪುರದ ಅಭಿಮಾನಿ

ಸಿದ್ದಾಪುರ: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣ ಬಳಿ ಉಂಟಾದ ಕಾಲ್ತುಳಿತದಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮಹಿಳೆ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

26 ವರ್ಷದ ಅಕ್ಷತಾ ಮೃತ ಮಹಿಳೆ. ಒಂದು ವರ್ಷದ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದ್ದು ಗಂಡ ಹೆಂಡತಿ ಇಬ್ಬರೂ ಆರ್.ಸಿ.ಬಿ ಅಭಿಮಾನಿಗಳಾಗಿದ್ದು  ನಿನ್ನೆ  ಮಧ್ಯಾಹ್ನ ಕಚೇರಿಗೆ ರಜೆ ಹಾಕಿ ಇಬ್ಬರೂ ಆರ್.ಸಿ.ಬಿ ಟೀಶರ್ಟ ಧರಿಸಿ ರೋಡ್ ಶೋಗೆ ಭಾಗವಹಿಸಲು ತೆರಳಿದ್ದರು. ಆ ವೇಳೆ ಕಾಲ್ತುಳಿತವಾಗಿ ಗಂಡನ ಎದುರೆ ಪತ್ನಿ ಸಾವನ್ಮಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ರೋಡ್ ಶೋ ಕ್ಯಾನ್ಸಲ್ ಆಗಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಬ್ಬರೂ ತೆರಳಿದ್ದರು. ಕ್ರೀಡಾಂಗಣದ ಗೇಟ್ ನಂಬರ್ 17 ರಿಂದ ಒಳಹೋದ ದಂಪತಿಗಳು ಕಾಲ್ತುಳಿತವಾದಾಗ  ಆಶಯ್ ನಿಂದ ಬೇರ್ಪಟ್ಟಿದ್ದಳು. ಈ ವೇಳೆ ಇಬ್ಬರೂ ಕಾಲ್ತುಳಿತಕ್ಕೊಳಗಾದರೂ ಓರ್ವ ಮಹಿಳೆ ಆಶಯ್ ನನ್ನು ರಕ್ಷಣೆ ಮಾಡಿದ್ದರು.

ಆದರೇ ಅಕ್ಷತಾ ಜನರ ಕಾಲಡಿ ಸಿಕ್ಕಿ ಅಲ್ಲಿಯೇ ಮೃತಪಟ್ಟಿದ್ದಳು.ಇನ್ನು ಈಕೆ ಆರ್.ಸಿ.ಬಿ ಟೀಶರ್ಟ ಧರಿಸಿದ್ದರಿಂದ ಆಶಯ್ ಗೂ ಆಕೆಯನ್ನು ಗುರುತು ಹಿಡಿಯಲು ಸಾಧ್ಯವಾಗಿದ್ದು ಆಕೆ ಸಾವನ್ನಪ್ಪಿರುವುದು ಗೊತ್ತಾಗಿದೆ

ಬೌರಿಂಗ್‌ ಆಸ್ಪತ್ರೆಯಲ್ಲಿ ಮರಣೋತ್ತೊರ ಪರೀಕ್ಷೆ ನಡೆಸಿ ಅಕ್ಷತಾ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಸಿದ್ದಾಪುರಕ್ಕೆ ಮೃತದೇಹ ರವಾನೆಯಾಗಿದೆ. ಅಕ್ಷತಾ ಖಾಸಗಿ ಸಂಸ್ಥೆಯಲ್ಲಿ ಸಿಎ ಆಗಿ ಕೆಲಸ ಮಾಡುತ್ತಿದ್ದರು. ಪತಿ ಆಶಯ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ದಂಪತಿ ವಾಸವಾಗಿದ್ದರು.

ಪಕ್ಕಾ RCB ಅಭಿಮಾನಿಯಾಗಿರುವ ಇವರು 18 ವರ್ಷದ ನಂತರ RCB ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಚಿನ್ನಸ್ವಾಮಿ ಕ್ರಿಡಾಂಗಣಕ್ಕೆ ತೆರಳಿದ್ದರು ಎನ್ನಲಾಗಿದೆ. ಮೃತರಿಗೆ ತಾಲೂಕಾ ಆಡಳಿತದ ಪರವಾಗಿ ಅಂತಿಮ ನಮನ ಸಲ್ಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಉಪ ವಿಭಾಗಾಧಿಕಾರಿ ಕು.ಕಾವ್ಯರಾಣಿ ಮೃತರ ಮನೆಗೆ ತೆರಳಲಿದ್ದಾರೆ.