ಟೀಂ ಇಂಡಿಯಾದ್ದು 5 ದಿನ, ಸಿಎಸ್‌ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ‘ಜೆಡಿಎಸ್‌ ಆಕ್ರೋಶ’

  ಸರ್ಕಾರದ ಪ್ರಚಾರದ ಹುಚ್ಚಿಗೆ 11 ಮಂದಿ ಬಲಿ :

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವನ್ನು ಒಂದೇ ದಿನದಲ್ಲಿ ಆಚರಣೆ ನಡೆಸಲು ಅನುಮತಿ ನೀಡಿದ್ದು ಯಾಕೆ ಎಂದು ಸರ್ಕಾರ ಪ್ರಶ್ನಿಸಿ ಜೆಡಿಎಸ್‌ ಆಕ್ರೋಶವನ್ನು ಹೊರಹಾಕಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನೈತಿಕತೆ ಹೊತ್ತು ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು ಅಂತ ಜೆಡಿಎಸ್ ಆಗ್ರಹ ಮಾಡಿದೆ. ಎಕ್ಸ್‌ನಲ್ಲಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿರೋ ಜೆಡಿಎಸ್ ಈ ಘಟನೆ ಸರ್ಕಾರದ ಭದ್ರತಾ ವೈಫಲ್ಯ ಅಂತ ಕಿಡಿಕಾರಿದೆ. 

ಪೋಸ್ಟ್‌ನಲ್ಲಿ ಏನಿದೆ?
ಕಾಂಗ್ರೆಸ್ ಸರ್ಕಾರದ ಹುಚ್ಚು ಪ್ರಚಾರ ಪಡೆಯುವ ಗೀಳು 11ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಅಧಿಕಾರದ ಅಮಲಿನಲ್ಲಿರುವ ಪ್ರಚಾರಪ್ರಿಯ, ಜಾಹೀರಾತು ಪ್ರಿಯ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಲ್ಲಿ ರಾರಾಜಿಸಲು ಹೋಗಿ ಮುಗ್ಧ ಜನರ ಜೀವದ ಜೊತೆ ಚಲ್ಲಾಟವಾಡಿದೆ.

ವಿಜಯದ ಪರೇಡ್‌ಗಳನ್ನು ಆಚರಿಸುವ ಸಮಯದಲ್ಲಿ ಸರಿಯಾದ ನಾಗರಿಕರ ಸುರಕ್ಷತಾ ಕ್ರಮಗಳನ್ನು , ಪೊಲೀಸ್ ಭದ್ರತಾ ವ್ಯವಸ್ಥೆ ಮತ್ತು ಜನಸಂದಣಿ ನಿರ್ವಹಣೆಯೊಂದಿಗೆ ಯೋಜಿಸಬೇಕು, ರಾಜಕೀಯ ಲಾಭಕ್ಕಾಗಿ ಆತುರಪಡಬಾರದು ಎಂಬುದಕ್ಕೆ ಕಾಲ್ತುಳಿತ ದುರಂತವೇ ಸಾಕ್ಷಿ.

ಕೆಕೆಆರ್ 2 ದಿನಗಳ ನಂತರ ಕೋಲ್ಕತ್ತಾದಲ್ಲಿ ವಿಜಯ ಪರೇಡ್ ನಡೆಸಿತು. ಮುಂಬೈ 2 ದಿನಗಳ ಬಳಿಕ ವಿಜಯೋತ್ಸವ ಮೆರವಣಿಗೆ ಆಯೋಜಿಸಿತು. ಸಿಎಸ್‌ಕೆ 3 ದಿನಗಳ ನಂತರ ವಿಜಯದ ಪರೇಡ್ ನಡೆಸಿತು. ಭಾರತ ತಂಡ 5 ದಿನಗಳ ನಂತರ ತಮ್ಮ ಟಿ -20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ನಡೆಸಿತು.

ಲಕ್ಷಾಂತರ ಜನ ಸೇರುವ ಕ್ರೀಡಾಂಗಣದ ಬಳಿ ಆಗಿರುವ ಭದ್ರತಾ ಲೋಪಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ.ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ನೈತಿಕ ಹೊಣೆಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಅಂತ ಅಗ್ರಹಿಸಿದೆ.