ನನ್ನ ಮೊಮ್ಮಗಳ ಸಾವಿಗೆ ‘ಸರ್ಕಾರವೇ ನೇರ ಹೊಣೆ ‘ : ಮೃತ ದಿವ್ಯಾಂಶಿ ಅಜ್ಜ ಕಿಡಿ

ಬೆಂಗಳೂರು: ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಮೃತಪಟ್ಟ ಯಲಹಂಕದ ದಿವ್ಯಾಂಶಿಯ ಅಜ್ಜ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬುಧವಾರ 4:30ಕ್ಕೆ ಕರೆ ಮಾಡಿ ದಿವ್ಯಾಂಶಿ ಮೃತಪಟ್ಟ ಮಾಹಿತಿ ನೀಡಿದರು. ಇಂದು ಸಂಜೆ ಆಂಧ್ರದ ಅನ್ನಮಯ ಜಿಲ್ಲೆಗೆ ಮೃತದೇಹ ಶಿಫ್ಟ್ ಮಾಡುತ್ತೇವೆ. ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ. ಯಾವುದೇ ಪೋಲಿಸ್ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೇಟ್ ನಂಬರ್ 15ರ ಒಳಗೆ ಹೋದಾಗ ಈ ಘಟನೆ ನಡೆದಿದೆ. ಬಿದ್ದ ಮೊಮ್ಮಗಳನ್ನು ಜೊತೆಗೆ ಇದ್ದವರೇ ಆಟೋದಲ್ಲಿ ಕರೆದುಕೊಂಡು ಹೋದರು. ಸರ್ಕಾರ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ತಾಯಿ, ಚಿಕ್ಕಮ್ಮ ಜೊತೆಗೆ ಹೋಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. 

9ನೇ ತರಗತಿ ಓದುತ್ತಿದ್ದ ದಿವ್ಯಾಂಶಿ ಕಾಲ್ತುಳಿತದ ವೇಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಸದ್ಯ ದಿವ್ಯಾಂಶಿ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. 

ಶಿವಕುಮಾರ್ ಹಾಗೂ ಅಶ್ವಿನಿ ದಂಪತಿಯ ಮಗಳಾದ ದಿವ್ಯಾಂಶಿ ಚಿಕ್ಕಮ್ಮ ರಚನಾ ಹಾಗೂ ಇನ್ನಿಬ್ಬರ ಜೊತೆ ಆರ್‌ಸಿಬಿ ಸಂಭ್ರಮಾಚರಣೆ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದಳು. ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಅಸ್ವಸ್ಥಗೊಂಡು ಬಳಿಕ ಮೃತಪಟ್ಟಿದ್ದಾಳೆ. ಯಲಹಂಕದ ಚೌಡೇಶ್ವರಿ ಲೇ ಔಟ್ ಮನೆಗೆ ದಿವ್ಯಾಂಶಿ ಮೃತದೇಹ ರವಾನಿಸಲಾಗಿದೆ. ಯಲಹಂಕದಲ್ಲಿ ದಿವ್ಯಾಂಶಿ ಅಂತ್ಯಸಂಸ್ಕಾರ ನೆರವೇರಲಿದೆ.