ಹೊನ್ನಾವರ ಮೇ30 : ಕರ್ಕಿಯ ಗಾಬ್ರಿ ಭಟ್ ಕುಟುಂಬದ ಕರ್ನಲ್ ರಾಮ ಗಾಬ್ರಿ ತಮ್ಮ 61ನೇ ವಯಸ್ಸಿನಲ್ಲಿ ಬೆಂಗಳೂರಿನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಿಜಾಪುರ ಸೈನಿಕ ಶಾಲೆ, ಡೆಹ್ರಾಡೂನ್ ಮಿಲಿಟ್ರಿ ಅಕಾಡೆಮಿಯಲ್ಲಿ ಶಿಕ್ಷಣ ಪಡೆದಿದ್ದ ಇವರು ಮದ್ರಾಸ್ ರೆಜಿಮೆಂಟಿನ ಎಂಜಿನಿಯರಿಂಗ್ ವಿಭಾಗದಲ್ಲಿ ಭೂಗತ ಬಾಂಬ್ ತಪಾಸಣೆಯಲ್ಲಿ ಪರಿಣಿತಿಗಳಿಸಿದ್ದರು. ಕಾಶ್ಮೀರ ಭಯೋತ್ಪಾದಕರ ಹಿಡಿತದಲ್ಲಿದ್ದಾಗ ಪ್ರಕ್ಷುಬ್ಧ ಊದಮ್‌ಪುರದಲ್ಲಿ ಸೇವೆ ಸಲ್ಲಿಸಿದ್ದರು.

ವಿಶ್ವಸಂಸ್ಥೆಯ ಶಾಂತಿಸೇನೆಯ ಅಧಿಕಾರಿಯಾಗಿ ಭಾರತದ ಸೈನ್ಯವನ್ನು ಪ್ರತಿನಿಧಿಸಿ ಆಫ್ರಿಕಾದ ವಜ್ರದ ಗಣಿಯ ಮೇಲೆ ಭಯೋತ್ಪಾದಕರ ಹಿಡಿತ ತಪ್ಪಿಸಲು ಕಾದಾಡಿದ್ದರು. ಅದೇ ಸಂದರ್ಭದಲ್ಲಿ ಭಯೋತ್ಪಾದಕರಿಂದ ಬಂಧನಕ್ಕೊಳಗಾಗಿ 3 ತಿಂಗಳು ಅರಣ್ಯದಲ್ಲಿದ್ದರು.
ಭಾರತ ಹೆಚ್ಚು ಸೈನಿಕರನ್ನು ಕಳುಹಿಸಿ ಆಫ್ರಿಕಾದಲ್ಲಿ ಕಾರ್ಯಾಚರಣೆ ನಡೆಸಿ ಭಾರತೀಯ ಯೋಧರನ್ನು ಬಿಡಿಸಿಕೊಂಡು ಬಂದಾಗ ರಾಮ ಗಾಬ್ರಿ ಭಾರತಕ್ಕೆ ಬಂದು ಸೇವೆ ಮುಂದುವರಿಸಿದರು. ಇವರಿಗೆ ವಿಶ್ವಸಂಸ್ಥೆ ಮತ್ತು ಭಾರತೀಯ ಸೈನ್ಯ ವಿಶೇಷ ಸಾಹಸ ನಡೆಸಿದ ಕಾರಣ ಹಲವು ಮೆಡಲ್‌ಗಳನ್ನು ನೀಡಿ ಗೌರವಿಸಿತ್ತು.
ಇವರ ತಾಯಿ ಶಾಂತಿ, ತಂದೆ ಸುಬ್ರಾಯ ರಾಮ ಭಟ್ ಗಾಬ್ರಿ ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದರು. ರಾಮ ಗಾಬ್ರಿ ವಯೋವೃದ್ಧ ತಂದೆ, ಪತ್ನಿ ಮತ್ತು ಮಗ ಮತ್ತು ಸಹೋದರಿಯರನ್ನು, ಬಂಧುಗಳನ್ನು ಅಗಲಿದ್ದಾರೆ. ನಿವೃತ್ತ ತಹಶೀಲ್ದಾರ ಕೆ.ಎಸ್. ಭಟ್ ಕರ್ಕಿ ತಮ್ಮ ಊರಿನ ಹೆಮ್ಮೆ ರಾಮ ಗಾಬ್ರಿ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಪ್ರೋ. ಆರ್.ಎಲ್. ಕನಕ್, ಶಿರಾಲಿಯ ಕೃಷ್ಣಾನಂದ ಯಾಜಿ, ಎಸ್. ಶಂಭು ಭಟ್ ಕಡತೋಕ ಮತ್ತು ಕರ್ಕಿ ಗ್ರಾಮದ ಗಣ್ಯರು ರಾಮ ಗಾಬ್ರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

