ದರೋಡೆಗೆ ಹೊಂಚುಹಾಕುತ್ತಿದ್ದ ಗರುಡಾ ಗ್ಯಾಂಗ್ ನ ಮೂವರು ಆರೋಪಿಗಳ ಬಂಧನ

ಭಟ್ಕಳ : ಭಟ್ಕಳದಲ್ಲಿ ದರೋಡೆಗೆ ಹೊಂಚುಹಾಕುತ್ತಿದ್ದ ಗರುಡಾ ಗ್ಯಾಂಗ್ ನ ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.

ಮಂಗಳೂರಿನ ಚೊಕ್ಕಬೆಟ್ಟು ನಿವಾಸಿ ಜಲೀಲ್‌ ಹುಸೈನ್‌ (೩೯), ಭಟ್ಕಳದ ಹೆಬಳೆಯ ಗಾಂಧಿನಗರದ ನಾಸಿರ್ ಹಕೀಮ್ ಮೊಹಿದ್ದೀನ್ ಅಬುಲ್ ಖಾದರ್‌ (೨೬) ಮತ್ತು ಓರ್ವ ಬಾಲಕನನ್ನು ಬಂಧಿಸಲಾಗಿದೆ. ಭಟ್ಕಳದ ಮುಗ್ಧಂ ಕಾಲೋನಿಯ ಜಿಶಾನ್, ಭಟ್ಕಳದ ಬಟ್ಟಾಗಾಂವ್ ನಿವಾಸಿ ನಬೀಲ್ ಪರಾರಿಯಾಗಿದ್ದಾರೆ. ಇವರಿಬ್ಬರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಬಂಧಿತರಲ್ಲಿ ಜಲೀಲ್ ಹುಸೈನ್ ವೃತ್ತಿಯಲ್ಲಿ ಚಾಲಕನಾಗಿದ್ದು, ಗರುಡಾ ಗ್ಯಾಂಗಿನ ಸದಸ್ಯನಾಗಿದ್ದಾನೆ. ಈತನ ಮೇಲೆ ಈಗಾಗಲೇ ೧೧ ಪ್ರಕರಣಗಳು ದಾಖಲಾಗಿದ್ದು, ಅಂತರ್ ಜಿಲ್ಲಾ ನಟೋರಿಯಸ್ ಕಳ್ಳನಾಗಿದ್ದಾನೆ. ಈತ ಕಳ್ಳತನ ಮತ್ತು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿದ್ದಾನೆ. ನಾಸಿ‌ರ್ ಹಕೀಮ್ ವಿರುದ್ಧ ಈಗಾಗಲೇ ೨ ಪ್ರಕರಣಗಳು ದಾಖಲಾಗಿವೆ. ಈತನು ಅಂತ‌ರ್ ಜಿಲ್ಲಾ ನಟೋರಿಯಸ್ ಕಳ್ಳನಾಗಿದ್ದು, ಈತನು ಕೂಡ ಕಳ್ಳತನ ಮತ್ತು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿದ್ದಾನೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಮೇಲೆ ಈಗಾಗಲೇ ೧ ಪ್ರಕರಣ ದಾಖಲಾಗಿದೆ.

ಮೇ ೨೮ರಂದು ಬೆಳಗಿನ ಜಾವ ೩ರ ಸುಮಾರಿಗೆ ಬಿಲಾಲಖಂಡ ಗ್ರಾಮದ ಸಾಗರ ರಸ್ತೆಯಲ್ಲಿ (Sagar Road) ಐವರು ಆರೋಪಿತರು ದರೋಡೆ ಸಂಚು ರೂಪಿಸಿದ್ದರು. ಬೂದು ಬಣ್ಣದ ಟೊಯೋಟಾ ಇನ್ನೋವಾ ಕಾರಿನಲ್ಲಿ (Toyota Innova Car) ಬಂದ ಇವರು ದರೋಡೆಗೆ ಅಗತ್ಯ ಇರುವ ಚಾಕು, ಖಾರಾಪುಡಿ, ಮಂಕಿಕ್ಯಾಪ್, ಬೆಲ್ಟ್, ತಾಡಪತ್ರೆ ಮತ್ತಿತರ ವಸ್ತುಗಳನ್ನು ಇಟ್ಟುಕೊಂಡಿದ್ದರು. ಗುಳ್ಳಿ ರಸ್ತೆಯ ಕ್ರಾಸ್ ಹತ್ತಿರ ಕತ್ತಲೆಯಲ್ಲಿ ಆರೋಪಿತರು ಕಾರಿನಲ್ಲಿ ಕುಳಿತಿದ್ದನ್ನು ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸೈ ರನ್ನಗೌಡ ಪಾಟೀಲ ಗಮನಿಸಿದರು.

ಆರೋಪಿತರನ್ನು ನೋಡಿ ವಿಚಾರಿಸಲು ಹೋದಾಗ ಆರೋಪಿತರು ತಪ್ಪಿಸಿಕೊಳ್ಳಲು ಕಾರನ್ನು ಹಿಮ್ಮುಖವಾಗಿ ಚಲಾಯಿಸಲು ಹೋಗಿ ನಿಯಂತ್ರಣ ತಪ್ಪಿ ಕಾರು ಗಟಾರಿಗೆ ಬಿದ್ದಿದೆ. ಈ ವೇಳೆ ಮೂವರು ಆರೋಪಿತರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರಿಂದ ನೋಕಿಯಾ ಕೀಪ್ಯಾಡ್ ಮೊಬೈಲ್ ಪೋನ್‌, ನಥಿಂಗ್‌ ೨ಎ ಮೊಬೈಲ್‌ ಪೋನ್‌, ೧೫೦೦ ರೂ. ನಗದು, ಟೊಯೊಟಾ ಇನ್ನೋವಾ ಕಾರು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ., ಜಗದೀಶ ಎಂ. ಮಾರ್ಗದರ್ಶನ ನೀಡಿದ್ದರು. ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ನೇತೃತ್ವದಲ್ಲಿ ಭಟ್ಕಳ ಶಹರ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ., ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಯೆಗಳಾದ ರನ್ನಗೌಡ ಪಾಟೀಲ, ಪಿಎಸೈ ಭರಮಪ್ಪ ಬೆಳಗಲಿ, ಭಟ್ಕಳ ಶಹರ ಪೊಲೀಸ್‌ ಠಾಣೆಯ ಪಿಎಸೈಗಳಾದ ನವೀನ ಎಸ್. ನಾಯ್ಕ ಶಾಂತಿನಾಥ ಕೆ.ಪಾಸಾನೆ ಮತ್ತು ಸಿಬ್ಬಂದಿ ವಿನಾಯಕ ಪಾಟೀಲ, ಅಂಬರೀಶ ಕುಂಬಾರಿ, ವಿನೋದ ಜಿ.ಬಿ., ಲೋಕೇಶ ಕತ್ತಿ ನಿಂಗನಗೌಡ ಪಾಟೀಲ, ಜಗದೀಶ ನಾಯ್ಕ ವಿಜಯ ಜಾಧವ, ದುರ್ಗೇಶ ನಾಯ್ಕ ಮತ್ತು ದೇವರಾಜ ಮೊಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.