ಇಂದು ಆರ್​ಸಿಬಿ vs ಪಂಜಾಬ್ ಕ್ವಾಲಿಫೈಯರ್​ ಕದನ! ಬೆಂಗಳೂರಿಗೆ ಟಕ್ಕರ್​ ಕೊಡಲು ಸಜ್ಜಾದ ಕನ್ನಡಿಗ – IPL 2025 PBKS VS RCB

18ನೇ ಆವೃತ್ತಿಯ ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಗುಜರಾತ್​ ಟೈಟನ್ಸ್​​ ​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳ ನಡುವಿನ ಕ್ವಾಲಿಫೈಯರ್​​ ಪಂದ್ಯ ಇಂದಿನಿಂದ ಪ್ರಾರಂಭವಾಗಲಿದೆ. ಮೊದಲ ಕ್ವಾಲಿಫೈಯರ್​​ ಕದನದಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ಪಂಜಾಬ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (PBKS vs RCB) ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ಎರಡೂ ತಂಡಗಳ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಯಾವುದೇ ತಂಡ ಗೆಲುವು ಸಾಧಿಸಿದರೂ ನೇರವಾಗಿ ಫೈನಲ್​ಗೆ ಪ್ರವೇಶ ಪಡೆದುಕೊಳ್ಳಲಿದೆ.

ಈ ಮಹತ್ವದ ಪಂದ್ಯಕ್ಕೆ ಮುಲ್ಲಾನ್​ಪೂರದ ಮಹಾರಾಜ ಯದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರೀಡಾಂಗಣ ಆತಿಥ್ಯ ವಹಿಸಿಕೊಳ್ಳುತ್ತಿದೆ. ಈ ಮೈದಾನದಲ್ಲಿ ಉಭಯ ತಂಡಗಳು ಆಡಿದ್ದ ಹಿಂದಿನ ಪಂದ್ಯದಲ್ಲಿ ಆರ್​ಸಿಬಿ 7 ವಿಕೆಟ್​ಗಳಿಂದ ಗೆಲುವು ಸಾಧಿಸಿತ್ತು. ಇಂದು ಕೂಡ ಆರ್​​ಸಿಬಿ ಪಂದ್ಯ ಗೆಲ್ಲುವ ಫೆವರೀಟ್​ ತಂಡವಾಗಿದೆ. ಆದರೂ ಪಂಜಾಬ್​ ತಂಡ ಆರ್​ಸಿಬಿ ಮಣಿಸಲು ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ. ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಮೈದಾನಕ್ಕಿಳಿಯುತ್ತಿದೆ.

ಆರ್​ಸಿಬಿಗೆ ಟಕ್ಕರ್​ ಕೊಡಲು ಕನ್ನಡಿಗ ಸಜ್ಜು: ಇಂದು ಬೆಂಗಳೂರು ತಂಡವನ್ನು ಹೇಗಾದರೂ ಮಣಿಸಿ ಫೈನಲ್​​ಗೆ ತಲುಪುವ ಗುರಿಯನ್ನು ಹೊಂದಿರುವ ಪಂಜಾಬ್​ ತಂಡ ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ. ಜೊತೆಗೆ ಕನ್ನಡಿಗನನ್ನು ಕಣಕ್ಕಿಳಿಸಲು ಮುಂದಾಗಿದೆ. ಹೌದು ವೇಗದ ಬೌಲರ್​ ಆಗಿರುವ ವಿಜಯ ಕುಮಾರ್​ ವೈಶಾಕ್​ ಈ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ. ಇವರು ಈ ವರೆಗೂ ಆಡಿರುವ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧದ ಗೆಲುವಿನಲ್ಲಿ ವಿಜಯ್​ ಕುಮಾರ್​ ಪ್ರಮುಖರಾಗಿದ್ದರು. ಮುಂಬೈ ತಂಡದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್​ಗಳಾದ ವಿಲ್​ ಜಾಕ್ಸ್​ ಮತ್ತು ತಿಲಕ್​ ವರ್ಮಾ ವಿಕೆಟ್​ ಉರುಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಇಂದಿನ ಪಂದ್ಯದಲ್ಲೂ ಕಣಕ್ಕಿಳಿದು ಬೆಂಗಳೂರಿಗೆ ಟಕ್ಕರ್​ ಕೊಡಲು ಸಜ್ಜಾಗಿದ್ದಾರೆ.