ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

ಶ್ರೀನಗರ: ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಮೃತರಾದ 26 ಪ್ರವಾಸಿಗರ ನೆನಪಿಗಾಗಿ ಪಹಲ್ಗಾಮ್‌ನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಘೋಷಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ಏ.22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ 26 ನಾಗರಿಕರು ಬಲಿಯಾಗಿದ್ದರು. ಈ 26 ಜನರಿಗೆ ಶಾಶ್ವತ ಗೌರವ ಸಲ್ಲಿಸುವ ಸ್ಮರಣಾರ್ಥ ಸ್ಮಾರಕವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಸಂಪುಟ ಸಭೆ ಬಳಿಕ ನಿರ್ಮಾಣದ ಕೆಲಸ ಪ್ರಾರಂಭಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.

ಉಗ್ರರ ದಾಳಿಯಲ್ಲಿ ಪಾಣತೆತ್ತ 26 ಮುಗ್ಧ ಪ್ರವಾಸಿಗರಿಗೆ ಬೈಸರನ್‌ನಲ್ಲಿ ಸ್ಮಾರಕವನ್ನು ಸ್ಥಾಪಿಸಲಾಗುವುದು. ಇದು ಅವರಿಗೆ ನಾವು ಸಲ್ಲಿಸುತ್ತಿರುವ ಶಾಶ್ವತ ಗೌರವ ಎಂದು ಒತ್ತಿಹೇಳಿದರು. ಭವ್ಯವಾಗಿರುವ ಸ್ಮಾರಕವನ್ನು ನಿರ್ಮಿಸುವ ಮೂಲಕ ಕುಸಿದು ಹೋಗಿರುವ ಕಾಶ್ಮೀರದ ಪ್ರವಾಸೋದ್ಯಮವನ್ನು ಪುನಃ ಮೇಲೆತ್ತಲು ಪ್ರಯತ್ನಿಸುತ್ತೇವೆ ಎಂದರು.

ಸದ್ಯ ಈ ಸ್ಮಾರಕದ ನಿರ್ಮಾಣ ಕೆಲಸಕ್ಕೆ ತಾತ್ವಿಕ ಅನುಮೋದನೆ ನೀಡಲು ಲೋಕೋಪಯೋಗಿ ಇಲಾಖೆಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.