ಯತ್ನಾಳ್​​​ ಉಚ್ಛಾಟನೆಗೆ ಯಡಿಯೂರಪ್ಪ ಕಾರಣ, ಬಿಜೆಪಿಯಲ್ಲಿನ ಪಂಚಮಸಾಲಿ ನಾಯಕರು ಪಕ್ಷದಿಂದ ಹೊರಬನ್ನಿ: ಸ್ವಾಮೀಜಿ

ಧಾರವಾಡ, ಮಾರ್ಚ್​ 26: ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಉಚ್ಛಾಟನೆಯನ್ನು ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಜೊತೆಗೆ ಲಿಂಗಾಯತ ಪಂಚಮಸಾಲಿ  ಸಮಾಜದ ಸ್ಚಾಮೀಜಿಗಳು ಕೂಡ ಖಂಡಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದ್ದನ್ನು ಲಿಂಗಾಯತ ಪಂಚಮಸಾಲಿ ಸಮಾಜ ಖಂಡಿಸುತ್ತೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಸಿದ ಅವರು, ಬಸನಗೌಡ ಪಾಟೀಲ್​ ಯತ್ನಾಳ ಉಚ್ಛಾಟನೆಗೆ ಬಿಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬವೇ ಕಾರಣ. ಇದನ್ನು ನಾನು ನೇರವಾಗಿ ಆರೋಪ ಮಾಡುತ್ತೇನೆ. ಬಿಜೆಪಿಯಲ್ಲಿರುವ ಪಂಚಮಸಾಲಿಗಳು ರಾಜೀನಾಮೆ ನೀಡಬೇಕು. ಪಕ್ಷದಲ್ಲಿರುವ ಪಂಚಮಸಾಲಿಗಳು ಹೊರಗೆ ಬರಬೇಕು. ಯತ್ನಾಳ ಉಚ್ಛಾಟನೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪಂಚಮಸಾಲಿಗಳು ಬಿಜೆಪಿಯಿಂದ ಹೊರ ಬರಬೇಕು ಎಂದು ಕರೆ ನೀಡಿದ್ದಾರೆ.

ನಾವು ಉಗ್ರ ಹೋರಾಟ ಮಾಡುತ್ತೇವೆ. ಈ ಹೋರಾಟ ಪ್ರಧಾನಿ ಮೋದಿ, ಸಚಿವ ಅಮಿತ್​ ಶಾ ವಿರುದ್ಧ ಅಲ್ಲ. ಪಂಚಮಸಾಲಿಗಳ ನಾಯಕತ್ವ ತುಳಿದವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಅಂದು, ಕಿತ್ತೂರು ರಾಣಿ ಚನ್ನಮ್ಮಳಿಗೆ ಮೋಸ ಮಾಡಿದ ಶಕ್ತಿಗಳೇ ಈಗ ಹೀಗೆ ಮಾಡುತ್ತಿವೆ. 21ನೇ ಶತಮಾನದಲ್ಲಿ ಅದೇ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ಉಚ್ಛಾಟನೆ ವಾಪಸ್ ಪಡೆಯಲೇಬೇಕು. ಇಲ್ಲದೇ ಹೋದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಲಿಂಗಾಯತ ಸಮಾಜ ಹಾಗೂ ಉತ್ತರ ಕರ್ನಾಟಕದ ಜನ ಖಂಡಿಸುತ್ತೆ. ಶಾಸಕ ಯತ್ನಾಳ್‌ ಯಾವತ್ತೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆಂದು ಉಚ್ಚಾಟನೆ ಮಾಡಿದ್ದಾರೆ. ಯತ್ನಾಳ್ ಉಚ್ಚಾಟನೆ ಮಾಡಲು ದುಷ್ಟ ವ್ಯಕ್ತಿಗಳು ಪರೋಕ್ಷವಾಗಿ ಕಾರಣವಾಗಿವೆ ಎಂದು ಹೇಳಿದರು.

ಬಿಜೆಪಿ ಭ್ರಷ್ಟಾಚಾರ ವಿರೋಧ ಅಂತಾ ಹೇಳುತ್ತದೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ವಿರುದ್ಧ ಮಾತಾಡಿದ್ದು ತಪ್ಪು ಅಂತಾರೆ ಇದು ಕುಟುಂಬ ರಾಜಕಾರಣ, ಭ್ರಷ್ಟಾಚಾರ ಒಪ್ಪಿಕೊಂಡಂತೆ ಆಗುತ್ತದೆ. ಪಕ್ಷದೊಳಗಿನ ದುಷ್ಟ ಶಕ್ತಿಗಳಿಂದ ಯತ್ನಾಳ್‌ರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಯತ್ನಾಳ್​ ಉಚ್ಛಾಟನೆಯಿಂದ ಪಂಚಮಸಾಲಿ ಸಮುದಾಯದ ಮನಸ್ಸಿಗೆ ಅಸಮಾಧಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಬಿಜೆಪಿ 66 ಸ್ಥಾನ ಬಂದಿದೆ, ಮುಂದೆ 36 ಸ್ಥಾನವೂ ಬರುವುದಿಲ್ಲ. ಯತ್ನಾಳ್ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಅಂತಾ ಹೀಗೆ ಮಾಡಿದ್ದಾರೆ. ಯತ್ನಾಳ್ ಉಚ್ಛಾಟನೆ ಹಿಂಪಡೆಯುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇವೆ. ಪಂಚಮಸಾಲಿ ಸಮಾಜಕ್ಕೆ ಏನೂ ಮಾಡದಿದ್ದರೂ ಬಿಜೆಪಿ ಜೊತೆಗಿದ್ದೇವೆ. ಅನ್ಯಾಯ ಸಹಿಸಿಕೊಂಡು ಶೇ.80ರಷ್ಟು ಸಮುದಾಯ ಬಿಜೆಪಿ ಜೊತೆಗಿದೆ. ಆದರೆ, ಸಮಾಜದ ನಾಯಕನನ್ನು ಉಚ್ಚಾಟಿಸಿದ್ದೀರಿ, ಇದು ಬಿಜೆಪಿಗೆ ಹಿನ್ನಡೆಯಾಗಿದೆ. ಇಂದಿನಿಂದಲೇ ಪ್ರತಿ ಹಳ್ಳಿಹಳ್ಳಿಯಲ್ಲೂ ಹೋರಾಟ ಶುರುವಾಗುತ್ತೆ ಎಂದರು.

ಗರುವಾರ (ಮಾ.27) ರಂದು ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯಲ್ಲಿ ತುರ್ತು ಸಭೆ ಕರೆದಿದ್ದೇವೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ. ಬೆಳಗಾವಿಯ ಗಾಂಧಿ ಭವನದಲ್ಲಿ ತುರ್ತು ಸಭೆ ನಡೆಸುತ್ತೇವೆ. ಸಭೆಯಲ್ಲಿ ಮುಂದಿನ ಹೋರಾಟ ತೀರ್ಮಾನಿಸುತ್ತೇವೆ. ಯತ್ನಾಳ ಪ್ರಾಮಾಣಿಕ ರಾಜಕಾರಣಿ. ನೇರ, ನಿಷ್ಠುರವಾದಿ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದ್ದವರು. ಯತ್ನಾಳ ನೇರವಾಗಿ ಮಾತನಾಡುವ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.