
ಉಡುಪಿ, ಮಾರ್ಚ್ 24: ನಗರದಲ್ಲಿ ಕೇವಲ ಮೀನು ಕದ್ದ ಆರೋಪಕ್ಕೆ ಮಹಿಳೆಯನ್ನ ಮರಕ್ಕೆ ಕಟ್ಟಿ ಹಾಕಿ ಹೊಡೆದ ಪ್ರಕರಣ ನಡೆದಿತ್ತು. ಇದು ಎಷ್ಟರ ಮಟ್ಟಿಗೆ ಸುದ್ದಿ ಮಾಡಿದೆ ಅಂದರೆ ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರು. ಅದರ ಬೆನ್ನೆಲ್ಲೇ ಐದು ಜನ ಮೀನುಗಾರರ ಬಂಧನವಾಗಿತ್ತು. ಜಾತಿ ನಿಂದನೆ ಕೇಸ್ ಕೂಡ ದಾಖಲಾಗಿತ್ತು. ಆದರೆ ಇದೀಗ ಸಂತ್ರಸ್ತೆ ಲಕ್ಷ್ಮೀ ಬಾಯಿ ಯಿಂದಲೇ ಜಾತಿ ನಿಂದನೆ ಕೇಸ್ ವಾಪಸ್ ಪಡೆಯಲು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿಗೆ ಮನವಿ ಮಾಡಿದ್ದಾರೆ. ಮಲ್ಪೆ ಬಂದರಿನಲ್ಲಿ ದುಡಿಯುವ ಬಂಜಾರ ಸಮುದಾಯದ ಕಾರ್ಮಿಕರಿಂದಲೇ ಮೀನುಗಾರ ಮಹಿಳೆಯರ ಮೇಲೆ ಹಾಕಿದ ಕೇಸ್ ವಾಪಸ್ ಪಡೆಯುವಂತೆ ಒತ್ತಾಯಿಸಲಾಗಿದೆ.
ಮೀನುಗಾರ ಮಹಿಳೆಯರ ಮೇಲೆ ಕೇಸ್ ದಾಖಲಿಸಿದ ಬಗ್ಗೆ ನನಗೆ ಗೊತ್ತಿರಲಿಲ್ಲ: ಸಂತ್ರಸ್ತೆ ಲಕ್ಷ್ಮೀ ಬಾಯಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ ಲಕ್ಷ್ಮೀ ಬಾಯಿ, ಪ್ರಕರಣ ರಾಜಿಯಲ್ಲಿ ಮುಗಿದಿತ್ತು. ನನಗೆ ಅಕ್ಷರ ಅಭ್ಯಾಸ ಇಲ್ಲ. ಯಾವುದಕ್ಕೆ ಸಹಿ ಪಡೆದಿದ್ದಾರೆ ಎಂದು ಗೊತ್ತಿಲ್ಲ. ಮೀನುಗಾರ ಮಹಿಳೆಯರ ಮೇಲೆ ಕೇಸ್ ದಾಖಲಿಸಿದ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಮೀನು ಕದ್ದಿರುವುದು ಹೌದು. ಅವತ್ತೇ ರಾತ್ರಿ ರಾಜಿ ಮಾಡಿ ಬಂದಿದ್ದೇವೆ. ರಾಜಿ ಮಾಡಿದ ನಂತರ ಮರುದಿನ ಫೋನ್ ಮಾಡಿದರು. ನಮ್ಮ ಜನ ಯಾರು ಇಲ್ಲ ಎಂಬ ಕಾರಣಕ್ಕೆ ನಾನು ಠಾಣೆಗೆ ಹೋಗಿಲ್ಲ. ಮನೆಗೆ ಬಂದು ಆಟೋ ಮಾಡಿ ಕರೆದುಕೊಂಡು ಹೋದರು. ಸಹಿ ಮಾಡಲು ಹೇಳಿದರು ನನಗೆ ಓದಲು ಬರುವುದಿಲ್ಲ. ನಿನ್ನೆ ನೀನು ರಾಜಿ ಆಗಿದ್ದೀಯಾ, ಇವತ್ತು ಹೆಬ್ಬೆಟ್ಟು ಹಾಕು ಅಂದರು. ಅದಕ್ಕೆ ನಾನು ಹೆಬ್ಬೆಟ್ಟು ಹಾಕಿದ್ದೇನೆ. ಮುಂದೆ ಏನು ವಿಚಾರ ಆಗಿದೆ ಗೊತ್ತಿಲ್ಲ. ಹೀಗಾಗಿ ದಾಖಲಾದ ಕೇಸ್ ವಾಪಾಸ್ ಪಡೆಯಲು ಒತ್ತಾಯಿಸಲಾಗಿದೆ ಎಂದಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಸುಮೋಟೋ ಕೇಸ್: ಬಂಧಿಸುವಂತೆ ಒತ್ತಾಯ
ಇನ್ನು ಪ್ರಕರಣ ಖಂಡಿಸಿ ಮೀನುಗಾರರು ನಡೆಸಿದ್ದ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ. ಅವರನ್ನು ಬಂಧಿಸುವಂತೆ ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ಒತ್ತಾಯಿಸಿದೆ. ಕದ್ದ ಮಹಿಳೆಯನ್ನು ಕಟ್ಟಿ ಹಾಕಿದ್ದರಲ್ಲಿ ತಪ್ಪಿಲ್ಲ ಎಂದು ಪ್ರಮೋದ್ ಮಧ್ವರಾಜ್ ಹೇಳಿಕೆ ನೀಡಿದ್ದರು. ಹೀಗಾಗಿ ಪ್ರಚೋದನಕಾರಿ ಭಾಷಣ ಆರೋಪದಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ಮಹಿಳೆ ಮೇಲಿನ ಹಲ್ಲೆ ಪ್ರಕರಣ ಖಂಡಿಸಿದ್ದು, ಐದು ಜನರನ್ನು ಮಾತ್ರ ಬಂಧಿಸಿದ್ದಾರೆ. ಇನ್ನೂ ಸಾಕಷ್ಟು ಜನರು ಭಾಗಿಯಾಗಿರುವ ಶಂಕೆ ಇದೆ. ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಕೃತ್ಯ ಸಮರ್ಥಿಸಿದ ಪ್ರಮೋದ್ ಮಧ್ವರಾಜ್ ಕೂಡಲೇ ಕ್ಷಮೆ ಯಾಚಿಸಬೇಕು. ಕೇವಲ ಕೇಸ್ ದಾಖಲಿಸುವುದಲ್ಲ ಪ್ರಮೋದ್ ರನ್ನು ಬಂಧಿಸಬೇಕು ಎಂದು ಸಂಘಟನೆಯ ಅಧ್ಯಕ್ಷ ಗಿರೀಶ್ ಡಿಆರ್ ಒತ್ತಾಯಿಸಿದ್ದಾರೆ.