ಉಡುಪಿಯಲ್ಲಿ ನಾಪತ್ತೆಯಾಗಿದ್ದ ಬಾಲಕ ಕೇರಳದ ಪಾಲಕ್ಕಾಡ್​ನಲ್ಲಿ ಪತ್ತೆ

ಉಡುಪಿ, ಸೆಪ್ಟೆಂಬರ್ 10: ಉಡುಪಿಯ ಕುಂಜಿಬೆಟ್ಟುವಿನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ತೆರಳಿದ್ದ 13 ವರ್ಷದ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಇದೀಗ ಕೇರಳದ ಪಾಲಕ್ಕಾಡ್​​ನಲ್ಲಿ ಪತ್ತೆಯಾಗಿದ್ದಾನೆ. ಪೋಷಕರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡು ತನಿಖೆ ನಡೆಸಿದ ಪೊಲೀಸರಿಗೆ, ಬಾಲಕ ರೈಲಿನಲ್ಲಿ ಪಾಲಕ್ಕಾಡ್​ಗೆ ತೆರಳಿದ್ದು ಗೊತ್ತಾಗಿದೆ.

ವಿದ್ಯಾರ್ಥಿ ಆರ್ಯನನ್ನು ಸೆಪ್ಟೆಂಬರ್ 8 ರಂದು ಆತನ ತಂದೆ ಪ್ರಕಾಶ್ ಶೆಟ್ಟಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಡ್ರಾಪ್ ಮಾಡಿದ್ದರು. ಆದರೆ, ಮಧ್ಯಾಹ್ನ 2:45 ರ ಸುಮಾರಿಗೆ ಕರೆದುಕೊಂಡು ಹೋಗಲು ಬಂದಾಗ ಆರ್ಯ ನಾಪತ್ತೆಯಾಗಿದ್ದ.

ಆ ದಿನ ಆರ್ಯ ಕೋಚಿಂಗ್ ಸೆಷನ್​ಗೆ ಹಾಜರಾಗಿರಲಿಲ್ಲ ಎಂದು ಕೋಚಿಂಗ್ ಸಿಬ್ಬಂದಿ ಕುಟುಂಬಕ್ಕೆ ತಿಳಿಸಿದ್ದಾರೆ. ಈ ಸಂಬಂಧ ಮನೆಯವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರಿಗೆ, ಆರ್ಯ ಪಾಲಕ್ಕಾಡ್‌ಗೆ ರೈಲಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಿರುವುದು ಗೊತ್ತಾಗಿದೆ. ಇದೀಗ ಆರ್ಯನನ್ನು ಉಡುಪಿಗೆ ಕರೆತರಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.