ಐಪಿಎಲ್ ಆಟಗಾರರ ವೇತನ ತಡೆ ಹಿಡಿಯಲು ಫ್ರಾಂಚೈಸಿಗಳ ಪ್ಲ್ಯಾನ್

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್ ಆರಂಭಕ್ಕೆ ಇನ್ನುಳಿದಿರುವುದು ದಿನಗಳು ಮಾತ್ರ. ಇದಾಗ್ಯೂ ಕೆಲ ಆಟಗಾರರು ಇನ್ನೂ ಸಹ ತಮ್ಮ ತಂಡಗಳನ್ನು ಕೂಡಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಫಿಟ್​ನೆಸ್ ಸಮಸ್ಯೆ. ಅಂದರೆ ಗಾಯಗೊಂಡಿರುವ ಕೆಲ ಆಟಗಾರರು ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಈ ಪಟ್ಟಿಯಲ್ಲಿ ಜಸ್​ಪ್ರೀತ್ ಬುಮ್ರಾ, ಮಯಾಂಕ್ ಯಾದವ್ ಸೇರಿದಂತೆ ಅನೇಕ ಆಟಗಾರರಿದ್ದಾರೆ. ಇನ್ನು ವೈಯುಕ್ತಿಕ ಕಾರಣಗಳಿಂದಾಗಿ ಕೆಎಲ್ ರಾಹುಲ್, ಅಝ್ಮತ್​ತುಲ್ಲಾ ಒಮರ್​ಝಾಹಿ ಸೇರಿದಂತೆ ಕೆಲ ಆಟಗಾರರು ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಮೊದಲಾರ್ಧದಕ್ಕೆ ಅನೇಕ ಆಟಗಾರರು ಅಲಭ್ಯರಾಗಿರುವುದರಿಂದ ಇದೀಗ ಫ್ರಾಂಚೈಸಿಗಳು ವೇತನ ಪಾವತಿಗೂ ಸೂತ್ರಗಳನ್ನು ಕಂಡುಕೊಂಡಿದೆ. ಅಂದರೆ ಆಟಗಾರರ ಗಾಯದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೆಲ ಫ್ರಾಂಚೈಸಿಗಳು 15-65-20 ಸೂತ್ರದೊಂದಿಗೆ ವೇತನ ಪಾವತಿಸಲು ಮುಂದಾಗಿದೆ.

ಇಲ್ಲಿ ಆಟಗಾರನು ಐಪಿಎಲ್​ಗೆ ಆಗಮಿಸುತ್ತಿದ್ದಂತೆ ಒಟ್ಟು ವೇತನದಿಂದ 15% ನೀಡಲಾಗುತ್ತಿದೆ. ಇನ್ನು ಮೊದಲಾರ್ಧದಲ್ಲಿ ಸಂಪೂರ್ಣ ಕಾಣಿಸಿಕೊಂಡ ಬಳಿಕ ಉಳಿದ 65% ವೇತನ ಪಾವತಿಸಲಿದ್ದಾರೆ. ಅಲ್ಲದೆ ಐಪಿಎಲ್ ಮುಗಿದ ಬಳಿಕ ಇನ್ನುಳಿದ 20% ವೇತನ ಪಾವತಿಸಲು ನಿರ್ಧರಿಸಲಾಗಿದೆ.

ಉದಾಹರಣೆಗೆ- 11 ಕೋಟಿ ರೂ.ಗೆ ಖರೀದಿಸಲಾಗಿರುವ ಮಯಾಂಕ್ ಯಾದವ್​ಗೆ ಲಕ್ನೋ ಸೂಪರ್ ಜೈಂಟ್ಸ್ ಆರಂಭದಲ್ಲಿ 1.65 ಕೋಟಿ ರೂ. ನೀಡಲಿದೆ. ಮೊದಲಾರ್ಧದ ಟೂರ್ನಿ ಮುಕ್ತಾಯದ ಬಳಿಕ 7.15 ಕೋಟಿ ರೂ. ನೀಡಲಿದ್ದಾರೆ. ಹಾಗೆಯೇ ದ್ವಿತೀಯಾರ್ಧದ ಪಂದ್ಯಗಳ ಬಳಿಕ 2.2 ಕೋಟಿ ರೂ. ಪಾವತಿಸಲಿದ್ದಾರೆ. ಇದೇ ಸೂತ್ರದೊಂದಿಗೆ ವೇತನ ಪಾವತಿಸಲು ಫ್ರಾಂಚೈಸಿಗಳು ಪ್ಲ್ಯಾನ್ ರೂಪಿಸಿದ್ದಾರೆ.

ಈ ಹಿಂದೆ ಬಹುತೇಕ ಫ್ರಾಂಚೈಸಿಗಳು ಮೊದಲಾರ್ಧಕ್ಕೂ ಮುನ್ನ 50% ಹಾಗೂ ದ್ವಿತೀಯಾರ್ಧದ ವೇಳೆ 50% ವೇತನ ಪಾವತಿಸುತ್ತಿದ್ದರು. ಇದರಿಂದ ಗಾಯಗೊಂಡ ಆಟಗಾರರು ಕೆಲ ಪಂದ್ಯಗಳಿಗೆ ಅಲಭ್ಯರಾದರೂ ಸಂಪೂರ್ಣ ವೇತನ ಪಡೆದುಕೊಳ್ಳುತ್ತಿದ್ದರು.

ಇದೀಗ ಈ ಸಮಸ್ಯೆಗೆ ಬ್ರೇಕ್ ಹಾಕಲು ಕೆಲ ಫ್ರಾಂಚೈಸಿಗಳು 15-65-20 ಸೂತ್ರವನ್ನು ಪರಿಚಯಿಸಿದೆ. ಈ ಮೂಲಕ ತಂಡದ ಜೊತೆಗಿರುವ ಆಟಗಾರರಿಗೆ ಮಾತ್ರ ವೇತನ ಪಾವತಿಸಲು ಪ್ಲ್ಯಾನ್ ರೂಪಿಸಿದ್ದಾರೆ. ಇದಾಗ್ಯೂ ಈ ವೇತನ ಪ್ರಕ್ರಿಯೆಯ ಸೂತ್ರವು ಆಯಾ ಫ್ರಾಂಚೈಸಿಗಳಿಗೆ ಬಿಟ್ಟದ್ದು ಎಂದು ಬಿಸಿಸಿಐ ಕೂಡ ಸ್ಪಷ್ಟಪಡಿಸಿದೆ.

ಅಂದರೆ ಫ್ರಾಂಚೈಸಿ ಬೇಕಿದ್ದರೆ ತಮ್ಮ ಆಟಗಾರರಿಗೆ ಆರಂಭದಲ್ಲೇ ಸಂಪೂರ್ಣ ಮೊತ್ತವನ್ನು ಪಾವತಿಸಬಹುದು. ಅಥವಾ ಟೂರ್ನಿ ಮುಕ್ತಾಯದ ಸಮಯದೊಳಗೆ ಪೂರ್ಣ ಸಂಬಳ ನೀಡಬಹುದು. ಇಲ್ಲ ಎರಡು ಅಥವಾ ಮೂರು ಹಂತಗಳ ಮೂಲಕ ಸಂಪೂರ್ಣ ವೇತನ ಪಾವತಿಸಬಹುದು ಎಂದು ತಿಳಿಸಲಾಗಿದೆ. ಅದರಂತೆ ಇದೀಗ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಫ್ರಾಂಚೈಸಿಗಳು ಮೂರು ಹಂತಗಳ ಮೂಲಕ ವೇತನ ಪಾವತಿಸಲು ಮುಂದಾಗಿದ್ದಾರೆ.