
ಉತ್ತರ ಕನ್ನಡ, ಮಾರ್ಚ್ 09: ಶಿರೂರು ಗುಡ್ಡ ಕುಸಿತ ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈ ಘಟನೆಯಲ್ಲಿ ಅದೊಂದು ಶ್ವಾನ ತಮ್ಮ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿತ್ತು. ಇದರ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಆದರೆ ಇದೀಗ ಈ ಶ್ವಾನ ಮತ್ತೆ ಎಲ್ಲರ ಗಮನ ಸೆಳೆಯುತ್ತಿದೆ. ಉತ್ತರ ಕನ್ನಡ ಪೊಲೀಸ್ ಆಯೋಜಿಸಿದ್ದ ಮ್ಯಾರಥಾನ್ನಲ್ಲಿ ಐದು ಕಿ.ಮೀ ಓಡುವ ಮೂಲಕ ಅಚ್ಚರಿಗೊಳಿಸಿದ್ದು, ಬೆಳ್ಳಿ ಪದಕ ಪಡೆದುಕೊಂಡಿದೆ.
ಜುಲೈ 16 ರಂದು ನಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬ ಸೇರಿ ಹನ್ನೊಂದು ಜನರು ಮೃತಪಟ್ಟಿದ್ದರು. ಈ ವೇಳೆ ಮಾಲೀಕ ಲಕ್ಷ್ಮಣ್ ನಾಯ್ಕ ಮೃತಪಟ್ಟ ಘಟನೆ ಸ್ಥಳದಲ್ಲಿ ಶ್ವಾನ ರೋಧಿಸಿತ್ತು.
ಶ್ವಾನ ಗಮನಿಸಿದ್ದ ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ್ ತನ್ನ ಮನೆಗೆ ತಂದು ಸಾಕಿದ್ದಾರೆ. ಶ್ವಾನಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ತರಬೇತಿ ಕೂಡ ನೀಡಲಾಗಿದೆ. ಇಂದು ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮ್ಯಾರಥಾನ್ನಲ್ಲಿ ಎಸ್ಪಿ ಎಂ ನಾರಾಯಣ್ ಜೊತೆ ಶ್ವಾನ ಓಡುವ ಮೂಲಕ ಎಲ್ಲರನ್ನು ಗಮನ ಸೆಳೆದಿದೆ.



