ಅನುಮತಿ ಇಲ್ಲದೆ ಚಿತ್ರೀಕರಣ, ರಾಣಾ ಸಿನಿಮಾ ಮೇಲೆ ಅರಣ್ಯ ಇಲಾಖೆಯಿಂದ ದಾಳಿ

Forest Department: ಅನುಮತಿ ಇಲ್ಲದೆ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವ ಚಿತ್ರತಂಡಗಳ ಬಗ್ಗೆ ಕಠಿಣ ನಿಲವನ್ನು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ತಳೆದಿದೆ. ಕೆಲ ದಿನಗಳ ಹಿಂದೆ ಜಮೀರ್ ಅಹ್ಮದ್ ಪುತ್ರನ ಸಿನಿಮಾದ ಚಿತ್ರೀಕರಣ ನಿಲ್ಲಿಸಿದ್ದ ಅರಣ್ಯ ಇಲಾಖೆ, ಇಂದು ತುಮಕೂರಿನ ಬಳಿಯ ನಾಮಚಿಲುಮೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಿನಿಮಾದ ಚಿತ್ರೀಕರಣ ನಿಲ್ಲಿಸಿ, ವಸ್ತುಗಳನ್ನು ಸೀಜ್ ಮಾಡಿದೆ.

ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕಡ್ಡಾಯ. ಆದರೆ ಬಹುತೇಕ ಸಿನಿಮಾ ಚಿತ್ರೀಕರಣ ತಂಡಗಳು ಅನುಮತಿ ಇಲ್ಲದೆ ಚಿತ್ರೀಕರಣ ನಡೆಸುತ್ತಾ ಬಂದಿವೆ. ಆದರೆ ಹೀಗೆ ಅನುಮತಿ ಇಲ್ಲದೆ ಅರಣ್ಯದಲ್ಲಿ, ಸಂರಕ್ಷಿತ ಅರಣ್ಯಗಳಲ್ಲಿ ಚಿತ್ರೀಕರಣ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಚಿತ್ರತಂಡಗಳ ಮೇಲೆ ಕ್ರಮಕ್ಕೆ ಮುಂದಾಗಿದೆ. ಇದೀಗ ತುಮಕೂರಿನ ನಾಮಚಿಲುಮೆ ಬಳಿ ಅನುಮತಿ ಇಲ್ಲದೆ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ಶಾಕ್ ನೀಡಿದೆ ಅರಣ್ಯ ಇಲಾಖೆ.

ನಟಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ತುಮಕೂರಿನ ಬಳಿಕ ನಾಮಚಿಲುಮೆಯಲ್ಲಿ ನಡೆಯುತ್ತಿತ್ತು. ತುಮಕೂರು ಎಸಿಎಫ್​ ಪವಿತ್ರಾ ನೇತೃತ್ವದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿತ್ರೀಕರಣವನ್ನು ಬಂದ್ ಮಾಡಿಸಿದ್ದಲ್ಲದೆ, ಚಿತ್ರೀಕರಣಕ್ಕೆ ಬಳಸಿದ್ದ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ಕಳೆದ 5 ದಿನದಿಂದ ನಾಮದಚಿಲುಮೆಯಲ್ಲಿ ನಡೆಯುತ್ತಿದ್ದ ಶೂಟಿಂಗ್, ತರುಣ್ ಸುಧೀರ್ ಕ್ರಿಯೇಟಿವ್ ಹೆಸರಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಟಿ ರಕ್ಷಿತಾ ಸಹೋದರ ರಾಣ, ಪ್ರಿಯಾಂಕಾ ಈ ಸಿನಿಮಾದಲ್ಲಿ ನಟಿಸುತ್ತಿದ್ದರು. ಸುಮಾರು 50-100 ಜನ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಅರಣ್ಯ ಇಲಾಖೆ ದಾಳಿ ವೇಳೆ ಸಿನಿಮಾ ಚಿತ್ರೀಕರಣಕ್ಕೆ ಬಳಸಲಾಗಿರುವ ಕ್ಯಾರವಾನ್, ಕ್ಯಾಮರಾ ಲೈಟ್, ಕೆಲ ಸಾಮಗ್ರಿ ಪತ್ತೆ, ಲೈಟ್, ಅಡುಗೆ ಸಾಮಗ್ರಿ, ಚೇರ್​ಗಳು, ಟೆಂಪೊ ಟ್ರಾವೆಲರ್ ಅನ್ನು ವಶಕ್ಕೆ ಪಡೆಯಲಾಗಿದೆ.

ಅಸಲಿಗೆ ಚಿತ್ರತಂಡ ತರುಣ್ ಸುಧೀರ್ ಪ್ರೊಡಕ್ಷನ್ಸ್ ಹೆಸರಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕೋರಿ ಈ ಮೊದಲೇ ಅರ್ಜಿ ಹಾಕಿತ್ತಂತೆ. ಆದರೆ ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ. ಫೆಬ್ರವರಿ 4, 18, 20ರಂದು ಶೂಟಿಂಗ್​ಗೆ ಅನುಮತಿ ‌ನೀಡುವಂತೆ ಪತ್ರ, ಜೊತೆಗೆ ಫೆ.13, 14, 18ರಂದು ಚಿತ್ರೀಕರಣಕ್ಕೆ ಅನುಮತಿ ನೀಡಲು ಪತ್ರ ಬರೆಯಲಾಗಿತ್ತು. ಆದರೆ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ, ಅನುಮತಿಯ ಹೊರತಾಗಿಯೂ ಚಿತ್ರತಂಡ ಚಿತ್ರೀಕರಣ ಶುರು ಮಾಡಿತ್ತು. ಇದೇ ಕಾರಣಕ್ಕೆ ಅರಣ್ಯ ಇಲಾಖೆಯವರು ಈಗ ಚಿತ್ರೀಕರಣ ಬಂದ್ ಮಾಡಿಸಿ, ಚಿತ್ರೀಕರಣಕ್ಕೆ ಬಳಸಿದ್ದ ವಸ್ತುಗಳನ್ನು ಸೀಜ್ ಮಾಡಿದೆ.

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಎಚ್​ಎಂಟಿ ಗ್ರೌಂಡ್ಸ್​ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಮರಗಳನ್ನು ಕಡಿದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಖುದ್ದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಅದಾದ ಬಳಿಕ ಅರಣ್ಯ ಇಲಾಖೆಯು ಅನುಮತಿ ಇಲ್ಲದೆ ಅರಣ್ಯದಲ್ಲಿ ಶೂಟಿಂಗ್ ನಡೆಸುವವರ ವಿರುದ್ಧ ಕಠಿಣ ನಿಲವು ತಳೆದಿದೆ. ‘ಕಾಂತಾರ ಚಾಪ್ಟರ್ 1’ ಚಿತ್ರತಂಡವೂ ಸಹ ಅರಣ್ಯದ ಚಿತ್ರೀಕರಣದ ವೇಳೆ ಬೆಂಕಿ ಬಳಸಿ ಅರಣ್ಯಕ್ಕೆ ಹಾನಿ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತಂತೆ ಚಿತ್ರತಂಡಕ್ಕೆ ನೊಟೀಸ್ ನೀಡಲಾಗಿದೆ. ಕೊಪ್ಪಳದ ಬಳಿ ಚಿತ್ರೀಕರಣ ನಡೆಸುತ್ತಿದ್ದ ಸಚಿವ ಜಮೀರ್ ಅಹ್ಮದ್ ಸಿನಿಮಾದ ಚಿತ್ರೀಕರಣವನ್ನು ಸಹ ಅರಣ್ಯ ಇಲಾಖೆ ನಿಲ್ಲಿಸಿತ್ತು. ಈಗ ರಾಣಾ ನಟನೆಯ ಸಿನಿಮಾದ ಚಿತ್ರೀಕಣವನ್ನು ನಿಲ್ಲಿಸಲಾಗಿದೆ.