ಕೈ ನಡುಗುತ್ತಿದೆ, ದಯಮಾಡಿ ಒಂದು ಸಿಗರೇಟ್ ಕೊಡಿಸಿ – ಪೊಲೀಸರ ಬಳಿ ದರ್ಶನ್‌ ಮನವಿ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ ಒಂದೇ ಒಂದು ಸಿಗರೇಟ್‌ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್‌, ವಿಚಾರಣೆಯಲ್ಲಿ ನಾನು ಏನು ತಪ್ಪು ಮಾಡಿಲ್ಲ, ನನಗೆ ಗೊತ್ತಿಲ್ಲ. ನಾನು ಕೊಲೆ ಮಾಡಲು ಹೇಳಿಲ್ಲ, ಮಾಡಿಸಿಯೂ ಇಲ್ಲ ಎಂದು ಅಲವತ್ತುಕೊಂಡಿದ್ದಾರೆ. ಇದೇ ವೇಳೆ ದಯಮಾಡಿ ಒಂದೇ ಒಂದು ಸಿಗರೇಟ್‌ ಕೊಡಿಸಿ, ಕೈಗಳು ನಡುಗುತ್ತಿವೆ ಅಂತ ಪೊಲೀಸರಿಗೆ ಬೇಡಿಕೊಂಡಿದ್ದಾರೆ. ಇದಕ್ಕೆ ಗರಂ ಆದ ಪೊಲೀಸರು, ಸಿಗರೇಟ್‌ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಸದ್ಯ ಆರೋಪಿ ದರ್ಶನ್‌, ಪೊಲೀಸರ ಎದುರು ತಾನೇನು ಮಾಡಿಲ್ಲ ಎಂದು ಹೇಳುತ್ತಿರುವುದಾದರೂ, ತನಿಖೆಯಲ್ಲಿ ದರ್ಶನ್‌ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಕೇಳಿದರೆ ಆಗ ಸೈಲೆಂಟ್‌ ಆಗುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಫೋಟಕ ಮಾಹಿತಿ ಬಯಲಿಗೆ:
ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕೊಲೆಗೈದ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದರೂ ಈ ಪ್ರಕರಣದಿಂದ ಪಾರಾಗಲು ದರ್ಶನ್‌ ಭಾರೀ ಪ್ಲ್ಯಾನ್‌ ಮಾಡಿದ ವಿಚಾರ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿಯನ್ನು ಕೊಲೆಮಾಡಿ ಶವ ವಿಲೇವಾರಿ ಬಳಿಕ ಹಂತಕರಿಗೆ ನಡುಕ ಶುರುವಾಗಿತ್ತು. ಹೀಗಾಗಿ ಮೂವರಲ್ಲಿ ಶರಣಾಗುವಂತೆ ದರ್ಶನ್‌ ಸೂಚನೆ ನೀಡಿದ್ದರು. ಜೂನ್‌ 10 ರಂದು ಮೂವರು ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿ ನಾವು ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು.

ಕೊಲೆ ಮಾಡಿ ಶರಣಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಮೂವರನ್ನು ಪ್ರತ್ಯೇಕವಾಗಿ ಕರೆದು ಪೊಲೀಸ್‌ ಶೈಲಿಯಲ್ಲಿ ವಿಚಾರಣೆ ನಡೆಸಿ ಯಾರ ಮಾಹಿತಿ ಮೇರೆಗೆ ಬಂದು ಶರಣಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಸಂಬಂಧವೇ ಇಲ್ಲದ ಒಂದೊಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಮತ್ತೆ ತನಿಖೆಗೆ ಇಳಿದು ಮೊಬೈಲ್‌ ಪರಿಶೀಲನೆ ನಡೆಸಿದಾಗ ದರ್ಶನ್‌ಗೆ ರಾತ್ರಿಯಿಡಿ ವಾಟ್ಸಪ್‌ ಕರೆ ಮಾಡಿರುವ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿದು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದಾಗ ಈ ಪ್ರಕರಣದ ನೈಜ ಹಂತಕರ ಬಗ್ಗೆ ಬಾಯಿಬಿಟ್ಟಿದ್ದಾರೆ.