ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ವಿಕೆಟ್ ಪತನವಾಗಿದೆ. ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣದಲ್ಲಿ ಆರೋಪಗಳು ಕೇಳಿಬಂದಿದ್ದರಿಂದ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾರೆ.
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ಗುರುವಾರ ಬೆಳಗ್ಗೆ ಮನವಿ ಪತ್ರಸಲ್ಲಿಸಿದ್ದರು. ನಂತರ ಸಚಿವ ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಿ.ನಾಗೇಂದ್ರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಸಿಬಿಐ ಎಂಟ್ರಿಯಾದರೆ ಸರ್ಕಾರಕ್ಕೂ ಸಂಕಷ್ಟ ಎದುರಾಗಲಿದೆ. ಹೀಗಾಗಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಸಚಿವ ಬಿ.ನಾಗೇಂದ್ರಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಹೀಗಾಗಿ ಸಚಿವ ರಾಜೀನಾಮೆ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ 187 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ, ಇದರಲ್ಲಿ 88 ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದರು. ಹೀಗಾಗಿ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಚಂದ್ರಶೇಖರ್ ಬರೆದಿರುವ ಡೆತ್ ನೋಟ್‌ನಲ್ಲಿ ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ವಾಲ್ಮೀಕಿ ನಿಗಮಕ್ಕೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ಆರ್. ರಾಜ್ ಕುಮಾರ್ ಅವರನ್ನು ನೇಮಿಸಿದೆ.