
ನವದೆಹಲಿ, ಫೆಬ್ರುವರಿ 18: ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶೀ ಹೂಡಿಕೆಗಳು (ಎಫ್ಐಐ) ಸಾಕಷ್ಟು ಪ್ರಮಾಣದಲ್ಲಿ ಹೊರಹೋಗುತ್ತಿವೆ. ತಿಂಗಳುಗಳಿಂದಲೂ ಇದು ನಿರಂತರವಾಗಿ ನಡೆಯುತ್ತಿದೆ. ಜಾಗತಿಕ ರಾಜಕೀಯ ಅಸ್ಥಿರತೆ, ಅಮೆರಿಕದ ಹೊಸ ಸರ್ಕಾರದ ಹೊಸ ನೀತಿ, ಭಾರತೀಯ ಮಾರುಕಟ್ಟೆಯ ಅತಿಯಾದ ಮೌಲ್ಯ ಇತ್ಯಾದಿ ಕಾರಣಗಳು ಕೇಳಿಬರುತ್ತಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಎಫ್ಐಐ ನಿರ್ಗಮನ ಕುರಿತು ಮಾತನಾಡಿದ್ದು, ಎಫ್ಐಐಗಳು ಹೂಡಿಕೆ ಹಿಂಪಡೆದು ಲಾಭ ಮಾಡಿಕೊಳ್ಳುತ್ತಿವೆ. ಭಾರತೀಯ ಮಾರುಕಟ್ಟೆ ಲಾಭದಾಯಕ ಎನಿಸಿದೆ ಎಂದು ವಿಶ್ಲೇಷಿಸಿದ್ದಾರೆ.
ನಿನ್ನೆ ಸೋಮವಾರ ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನಿರ್ಮಲಾ ಸೀತಾರಾಮನ್, ಭಾರತದ ಆರ್ಥಿಕತೆಯು ಹೂಡಿಕೆದಾರರಿಗೆ ಆಕರ್ಷಕ ಲಾಭ ನೀಡುತ್ತಿದೆ. ಎಫ್ಐಐಗಳು ಷೇರುಗಳನ್ನು ಮಾರಿ ಲಾಭ ಮಾಡುತ್ತಿರುವುದು ಇದಕ್ಕೆ ಸಾಕ್ಷಿ ಎಂಬುದು ಅವರ ಅನಿಸಿಕೆ.
ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಕೂಡ ಈ ವಿದೇಶೀ ಹೂಡಿಕೆಗಳ ನಿರ್ಗಮನದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಎಫ್ಪಿಐಗಳ ಚಲನೆಯು ಜಾಗತಿಕ ವಿದ್ಯಮಾನಗಳಿಂದ ಪ್ರಭಾವಿತವಾಗಿವೆ. ಹೂಡಿಕೆದಾರರು ಒಂದು ಉದಯೋನ್ಮುಖ ಮಾರುಕಟ್ಟೆ ತೊರೆದು ಬೇರೆ ಉದಯೋನ್ಮುಖ ಮಾರುಕಟ್ಟೆಗಳತ್ತ ಹೋಗುತ್ತಿದ್ದಾರೆ ಎಂಬುದು ತಪ್ಪು. ಜಾಗತಿಕ ಅನಿಶ್ಚಿತತೆ ಇದ್ದಾಗ ಈ ಹೂಡಿಕೆಗಳು ಅಮೆರಿಕಕ್ಕೆ ವಾಪಸ್ ಹೋಗುವ ಪ್ರವೃತ್ತಿ ಇರುತ್ತದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿಗಳು ಹೇಳಿದ್ದಾರೆ.
ಭಾರತದ ಸೆನ್ಸೆಕ್ಸ್ ಸೂಚ್ಯಂಕ 2024ರ ಸೆಪ್ಟೆಂಬರ್ನಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ತನ್ನ ಆ ಮಟ್ಟದಿಂದ ಅದು ಈಗ ಶೇ. 12ರಷ್ಟು ಇಳಿಮುಖ ಕಂಡಿದೆ. ಚೀನಾ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ಗಳನ್ನು ಘೋಷಿಸಿದಾಗ ಭಾರತದ ಷೇರು ಮಾರುಕಟ್ಟೆಯಿಂದ ವಿದೇಶೀ ಹೂಡಿಕೆಗಳ ಹೊರಹರಿವು ಆರಂಭವಾಗಿದ್ದು ಎನ್ನಲಾಗಿದೆ. 2024ರ ಅಕ್ಟೋಬರ್ನಿಂದ, ಅಂದರೆ ಕಳೆದ ನಾಲ್ಕೈದು ತಿಂಗಳಿಂದ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಿಂದ ಎರಡು ಲಕ್ಷ ಕೋಟಿ ರೂ ಹೂಡಿಕೆಯನ್ನು ಹಿಂಪಡೆದಿದ್ದಾರೆ. ಅದರಲ್ಲೂ 2025ರ ಮೊದಲ ಐದಾರು ವಾರದಲ್ಲಿ ಹತ್ತಿರ ಹತ್ತಿರ ಒಂದು ಲಕ್ಷ ಕೋಟಿ ರೂನಷ್ಟು ಹೂಡಿಕೆಗಳು ಹೊರಹೋಗಿವೆ ಎನ್ನುವುದು ಗಮನಾರ್ಹ. ಕಾರ್ಪೊರೇಟ್ ಗಳಿಕೆ ಕುಸಿದಿರುವುದು ಮತ್ತು ಅಮೆರಿಕದ ಹೊಸ ನೀತಿಗಳು ಈ ವರ್ಷದ ವಿದೇಶೀ ಹೂಡಿಕೆಗಳ ಹೊರಹರಿವಿಗೆ ಕಾರಣ ಎನ್ನಲಾಗಿದೆ.