CCL 2025: ತೆಲುಗು ವಾರಿಯರ್ಸ್​ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್​ಗೆ ಬೃಹತ್ ಜಯ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಮೊದಲ ದಿನದ ಎರಡನೇ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್​ ಹಾಗೂ ಅಖೀಲ್ ಅಕ್ಕಿನೇನಿ ನಾಯಕತ್ವದ ತೆಲುಗು ವಾರಿಯರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆಲ್​ರೌಂಡರ್ ಪ್ರದರ್ಶನ ನೀಡಿದ ಕರ್ನಾಟಕ ಬುಲ್ಡೋಜರ್ಸ್ ತಂಡ 46 ರನ್​ಗಳ ಅಮೋಘ ಜಯ ಸಾಧಿಸಿತು. ಬ್ಯಾಟಿಂಗ್​ನಲ್ಲಿ ಡಾರ್ಲಿಂಗ್ ಕೃಷ್ಣ ಸ್ಫೋಟಕ 80 ರನ್​ಗಳ ಇನ್ನಿಂಗ್ಸ್ ಆಡಿದರೆ. ಬೌಲಿಂಗ್‌ನಲ್ಲಿ ಚಂದನ್ ಹಾಗೂ ಅನೂಪ್ ಸಿಳೀನ್ ಅಮೋಘ ಪ್ರದರ್ಶನ ನೀಡಿದರು.
ಕೃಷ್ಣ ಸ್ಫೋಟಕ ಬ್ಯಾಟಿಂಗ್

ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ 10 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು. ತಂಡದ ಒರ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಆರಂಭಿಕ ಆಟಗಾರ ಡಾರ್ಲಿಂಗ್ ಕೃಷ್ಣ ಕೇವಲ 38 ಎಸೆತಗಳಲ್ಲಿ ಸ್ಫೋಟಕ 80 ರನ್ ಕಲೆಹಾಕಿದರು. ಈ ಇನ್ನಿಂಗ್ಸ್​ನಲ್ಲಿ ಕೃಷ್ಣರನ್ನು ಬಿಟ್ಟರೆ ತಂಡದ ಉಳಿದ ಆಟಗಾರರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಕಂಡುಬರಲಿಲ್ಲ. ಆದರೆ ಕೃಷ್ಣನಿಗೆ ಸಾಥ್ ನೀಡಿದ ಕರಣ್ ಕೂಡ ಅಜೇಯ 11 ರನ್​ಗಳ ಇನ್ನಿಂಗ್ಸ್ ಆಡಿದರು.

ಅಖಿಲ್ ಅರ್ಧಶತಕ

ಕರ್ನಾಟಕ ತಂಡವನ್ನು 113 ರನ್​ಗಳಿಗೆ ನಿಯಂತ್ರಿಸಿ ಬ್ಯಾಟಿಂಗ್‌ ಆರಂಭಿಸಿದ ತೆಲುಗು ವಾರಿಯರ್ಸ್​ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ ಆರಂಭಿಕರಿಬ್ಬರು 4 ಓವರ್​ಗಳಲ್ಲಿ 38 ರನ್ ಕಲೆಹಾಕಿದರು. ಆದಾಗ್ಯೂ ಕರ್ನಾಟಕ ತಂಡದ ಬೌಲರ್​ಗಳು ಹೆಚ್ಚು ರನ್ ಬಿಟ್ಟುಕೊಡದೆ ಎದುರಾಳಿ ತಂಡಕ್ಕೆ ಒತ್ತಡ ಹೇರಿದರು. ಆದರೆ ತೆಲುಗು ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಅಖಿಲ್ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು 10 ಓವರ್​ಗಳಲ್ಲಿ 99 ರನ್​ಗಳಿಗೆ ಕೊಂಡೊಯ್ದರು.

ರಾಜೀವ್- ಕರಣ್ ಜೊತೆಯಾಟ

14 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ನಿಗದಿತ 10 ಓವರ್​ಗಳಲ್ಲಿ 123 ರನ್ ಕಲೆಹಾಕಿ ತೆಲುಗು ವಾರಿಯರ್ಸ್​ ತಂಡಕ್ಕೆ 137 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ತಂಡದ ಪರ ರಾಜೀವ್ 25 ರನ್​ಗಳ ಇನ್ನಿಂಗ್ಸ್ ಆಡಿದರೆ, ಕರಣ್ ಕೂಡ ಸ್ಫೋಟಕ 34 ರನ್​ಗಳ ಕಾಣಿಕೆ ನೀಡಿದರು. ಈ ಇಬ್ಬರು ಆಟಗಾರರು ತಮ್ಮ ಹೊಡಿಬಡಿ ಆಟದ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಚಂದನ್- ಅನೂಪ್ ಸ್ಪಿನ್ ಮ್ಯಾಜಿಕ್

137 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ತೆಲುಗು ವಾರಿಯರ್ಸ್​ ತಂಡಕ್ಕೆ ಆರಂಭಿಕ ತಮನ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ರಾಜೀವ್ ಅವರ ಒಂದೇ ಓವರ್​ನಲ್ಲಿ 1 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 19 ರನ್ ಕಲೆಹಾಕಿದರು. ಆದರೆ 37 ರನ್ ಗಳಿಸಿ ತಮನ್ ಔಟಾದ ಬಳಿಕ ತೆಲುಗು ತಂಡದ ಇನ್ನಿಂಗ್ಸ್ ಹಳಿತಪ್ಪಿತು. ಇದರ ಜೊತೆಗೆ ನಾಯಕ ಅಕಿಲ್ ಕೂಡ 9 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯಾವ ಬ್ಯಾಟ್ಸ್‌ಮನ್​ಗೂ ಕ್ರೀಸ್​ನಲ್ಲಿ ನಿಂತು ರನ್ ಕಲೆಹಾಕಲು ಕರ್ನಾಟಕ ತಂಡದ ಬೌಲರ್​ಗಳು ಅವಕಾಶ ಮಾಡಿಕೊಡಲಿಲ್ಲ.