ಕುಂಭಮೇಳ ಕಾಲ್ತುಳಿತ: ಬೆಳಗಾವಿಯ ದಂಪತಿಗೆ ಗಾಯ, ಕರ್ನಾಟಕದ ಕೆಲವರು ಗಾಯಗೊಂಡಿರುವ ಶಂಕೆ

ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 50 ಜನ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಕೆಲವರು ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಇದೀಗ ಕರ್ನಾಟಕದ ಕೆಲವು ಮಂದಿ ಘಟನೆಯಲ್ಲಿ ಗಾಯಗೊಂಡಿರುವುದು ತಿಳಿದುಬಂದಿದೆ. ಬೆಳಗಾವಿಯ ದಂಪತಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ನಗರದ ಶೆಟ್ಟಿ ಗಲ್ಲಿ ದಂಪತಿಗೆ ಕಾಲ್ತುಳಿತದಲ್ಲಿ ಗಾಯವಾಗಿರುವುದು ತಿಳಿದುಬಂದಿದೆ. ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಗಾಯಗೊಂಡಿದ್ದು ಸದ್ಯ ಪ್ರಯಾಗ್‌ರಾಜ್​ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತದ ವೇಳೆ ದಂಪತಿ ಬೇರೆ ಬೇರೆಯಾಗಿದ್ದಾರೆ.

ಸದ್ಯ ಅರುಣ್ ಒಂದು ಆಸ್ಪತ್ರೆಯಲ್ಲಿ, ಕಾಂಚನಾ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.

ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ರವಿವಾರ ಬೆಳಗಾವಿಯಿಂದ ಹೊರಟ್ಟಿದ್ದರು. ಸದ್ಯ ಕಾಂಚನಾ ನಿರಂತರವಾಗಿ ಪುತ್ರ ಓಂಕಾರ್ ಜೊತೆಗೆ ಪೋನ್ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಓಂಕಾರ್ ‘ಟಿವಿ9’ ಗೆ ಮಾಹಿತಿ ನೀಡಿದ್ದಾರೆ.

ತಂದೆ ತಾಯಿಗೆ ಏನೂ ಆಗಿಲ್ಲ. ಗಾಯವಾಗಿದೆ ಅಷ್ಟೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಬೇರೆ ಆಸ್ಪತ್ರೆಯಲ್ಲಿ ಅಪ್ಪ, ಅಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನೂ ತೊಂದರೆ ಇಲ್ಲ, ಅರಾಮಗಿದ್ದೇವೆ ಎಂದು ತಾಯಿ ಕಾಂಚನಾ ತಿಳಿಸಿದ್ದಾರೆ ಎಂಬುದಾಗಿ ಓಂಕಾರ್ ತಿಳಿಸಿದ್ದಾರೆ.

ಬೆಳಗಾವಿಯಿಂದ ಕುಂಭಮೇಳಕ್ಕೆ ತೆರಳಿದ್ದ 30 ಜನ

ಬೆಳಗಾವಿಯಿಂದ ಒಟ್ಟು 30 ಜನರು ಕುಂಭಮೇಳಕ್ಕೆ ಹೋಗಿದ್ದರು. ಸದ್ಯ ಉಳಿದವರ ಅಪ್​ಡೇಟ್ ಬರಬೇಕಿದೆ. ಕಾಂಚನಾ ಕೋಪರ್ಡೆ ಮಾತ್ರ ಸಂಪರ್ಕದಲ್ಲಿದ್ದು, ಅರುಣ್ ಕೋಪರ್ಡೆ ಪುತ್ರನ ಸಂಪರ್ಕಕ್ಕೆ ಸಿಕ್ಕಿಲ್ಲ. ತಂದೆಯ ಮೊಬೈಲ್ ಮಿಸ್ ಆಗಿರಬಹುದು ಎಂದು ಪುತ್ರ ಓಂಕಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಕುಂಭಮೇಳ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಗಾಯಗೊಂಡಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ಕಳೆದ ವಾರದಿಂದ ಬೆಳಗಾವಿಯ ಅನೇಕ ಮಂಡಿ ವಿವಿಧ ಗುಂಪುಗಳಾಗಿ ಪ್ರಯಾಗ್‌ರಾಜ್‌ಗೆ ತೆರಳಿದ್ದಾರೆ. ಕೆಲವರು ರೈಲು ಮತ್ತು ವಿಮಾನದಲ್ಲಿ ಪ್ರಯಾಣಿಸಿದರೆ ಕೆಲವರು ಮಿನಿ ಬಸ್ ಮತ್ತು ಇತರ ವಾಹನಗಳಲ್ಲಿ ತೆರಳಿದ್ದರು.

ಜನವರಿ 28 ರ ಮಧ್ಯರಾತ್ರಿಯ ನಂತರ ಪ್ರಯಾಗ್‌ರಾಜ್‌ನ ಸಂಗಮ್ ದಂಡೆಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತದಲ್ಲಿ ಎಷ್ಟು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದನ್ನು ಉತ್ತರ ಪ್ರದೇಶ ಆಡಳಿತ ಇನ್ನೂ ಬಹಿರಂಗಪಡಿಸಿಲ್ಲ.