10 ವರ್ಷಗಳ ಬಳಿಕ ಗೆಳೆಯನ ಭೇಟಿಯಾದ ವಿರಾಟ್ ಕೊಹ್ಲಿ

ಜನವರಿ 30 ರಂದು ಪ್ರಾರಂಭವಾಗಲಿರುವ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕಾಗಿ ದೆಹಲಿ ತಂಡವನ್ನು ಪ್ರಕಟಿಸಲಾಗಿದೆ. 20 ಸದಸ್ಯರ ಈ ತಂಡದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ 12 ವರ್ಷಗಳ ಬಳಿಕ ಕಿಂಗ್ ಕೊಹ್ಲಿ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವುದು ಖಚಿತವಾಗಿದೆ.

ಬಾಲ್ಯದಲ್ಲಿ ಜೊತೆಯಾಗಿ ಆಡಿ ಬೆಳೆದವರು… ಜೊತೆ ಜೊತೆಯಾಗಿ ಕೀಟಲೆ ಮಾಡಿದವರು… ಜೊತೆಯಾಗಿಯೇ ದೊಡ್ಡ ಕನಸು ಕಂಡವರು… ಆದರೆ ಬೆಳೀತಾ ಬೆಳೀತಾ ದೂರವಾದರು. ಹೀಗೆ ದೂರವಾದವರು ಮಂಗಳವಾರ ಭೇಟಿಯಾಗಿದ್ದಾರೆ. ಅದು ಸಹ ಬರೋಬ್ಬರಿ 10 ವರ್ಷಗಳ ಬಳಿಕ. ಹೌದು, ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ಗೆಳೆಯ ಶಾವೇಝ್ ಖಾನ್ ಅವರನ್ನು ಹತ್ತು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. ಇಂತಹದೊಂದು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು ದೆಹಲಿಯ ಡಿಡಿಸಿಎ ಕ್ರಿಕೆಟ್ ಸ್ಟೇಡಿಯಂ

ರಣಜಿ ಟೂರ್ನಿ ಪಂದ್ಯದ ಅಭ್ಯಾಸಕ್ಕಾಗಿ ವಿರಾಟ್ ಕೊಹ್ಲಿ ದೆಹಲಿಯ ಡಿಡಿಸಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದ್ದರು. ಇದೇ ವೇಳೆ ಕೊಹ್ಲಿಯ ಚೈಲ್ಡ್​ವುಡ್ ಫ್ರೆಂಡ್ ಶಾವೇಝ್ ಖಾನ್ ತಮ್ಮ ಮಗನೊಂದಿಗೆ ಮೈದಾನಕ್ಕೆ ಆಗಮಿಸಿದ್ದಾರೆ. ಅಲ್ಲದೆ ನೇರವಾಗಿ ವಿರಾಟ್ ಕೊಹ್ಲಿ ಬಳಿ ತೆರಳಿ ಸಪ್ರೈಸ್ ನೀಡಿದ್ದಾರೆ.

ಈ ವೇಳೆ ಇಬ್ಬರು ಸಂತೋಷದಿಂದ ಆಲಿಂಗನ ಮಾಡುತ್ತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಶಾವೇಝ್ ತನ್ನ ಮಗನನ್ನು ಕೊಹ್ಲಿಗೆ ಪರಿಚಯಿಸಿದ್ದಾರೆ. ವಿಶೇಷ ಎಂದರೆ 9 ವರ್ಷದ ಮಗನಿಗೂ ತಂದೆಯ ಫ್ರೆಂಡ್ ಅಂದರೆ ಪಂಚಪ್ರಾಣ.

ಅದರಲ್ಲೂ ಶಾವೇಝ್ ಖಾನ್ ಅವರ ಪುತ್ರ ಕೂಡ ಕೊಹ್ಲಿಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಟ್ಟಿಕೊಂಡಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ಆಡಬೇಕೆಂಬ ಮನದಾಸೆಯನ್ನು ಸಹ ಕೊಹ್ಲಿಗೆ ತಿಳಿಸಿದ್ದಾರೆ. ಇದಕ್ಕಾಗಿ ನಾನೇನು ಮಾಡಬೇಕೆಂದು ಪುಟ್ಟ ಬಾಲಕ ಕೊಹ್ಲಿ ಜೊತೆ ಕೇಳಿದ್ದರು.

ಈ ಪ್ರಶ್ನೆಗೆ ವಿರಾಟ್ ಕೊಹ್ಲಿ ನೀಡಿದ ಉತ್ತರ… ಪರಿಶ್ರಮ ಮತ್ತು ಕಠಿಣ ಪರಿಶ್ರಮ. ನೀನೀಗ ಒಂದು ಗಂಟೆ ಪ್ರಾಕ್ಟೀಸ್ ಮಾಡುತ್ತಿದ್ದರೆ, ಇನ್ಮುಂದೆ 2 ಗಂಟೆಗಳ ಕಾಲ ಪ್ರಾಕ್ಟೀಸ್ ಮಾಡು. ಸಕ್ಸಸ್ ಆಗಲು ಇದೊಂದೇ ದಾರಿ. ಈಗ ನೀ 50 ರನ್​ಗಳಿಸುತ್ತಿದ್ದರೆ, 100 ರನ್​ಗಳಿಸಲು ಪ್ರಯತ್ನಿಸು. ಈಗೇನು ಮಾಡುತ್ತಿದ್ದೀಯಾ ಅದನ್ನು ದ್ವಿಗುಣಗೊಳಿಸು. ಹೀಗೆ ಕಠಿಣ ಪರಿಶ್ರಮ ಪಡುತ್ತಾ ಆಟವನ್ನು ಆಸ್ವಾದಿಸು. ಹೀಗೆ ಮಾಡಿದರೆ ಮುಂದೊಂದು ದಿನ ಯಶಸ್ಸು ಸಿಗುತ್ತದೆ ಎಂದು ಶಾವೇಝ್ ಖಾನ್ ಪುತ್ರನಿಗೆ ವಿರಾಟ್ ಕೊಹ್ಲಿ ಕಿವಿಮಾತು ಹೇಳಿದ್ದಾರೆ.

ಇದೀಗ ಗೆಳೆಯನ ಜೊತೆಗಿನ ವಿರಾಟ್ ಕೊಹ್ಲಿಯ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿಂಗ್ ಕೊಹ್ಲಿಯ ಸರಳತೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ರಣಜಿ ಟೂರ್ನಿಯಲ್ಲಿ ಕೊಹ್ಲಿ ಕಣಕ್ಕೆ

ವಿರಾಟ್ ಕೊಹ್ಲಿ ದೆಹಲಿ ಪರ ಕೊನೆಯ ಬಾರಿ ರಣಜಿ ಪಂದ್ಯವಾಡಿದ್ದು 2012 ರಲ್ಲಿ. ಉತ್ತರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಮೊದಲ ಇನಿಂಗ್ಸ್​ನಲ್ಲಿ 14 ಮತ್ತು ದ್ವಿತೀಯ ಇನಿಂಗ್ಸ್​ನಲ್ಲಿ 43 ರನ್ ಬಾರಿಸಿದ್ದರು. ಇದಾದ ಬಳಿಕ ಕೊಹ್ಲಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದರು. ಹೀಗಾಗಿ ಅವರು ಮತ್ತೆ ದೇಶೀಯ ಅಂಗಳದಲ್ಲಿ ಕಾಣಿಸಿಕೊಂಡಿರಲಿಲ್ಲ.

ಆದರೀಗ ಟೀಮ್ ಇಂಡಿಯಾ ಆಟಗಾರರು ರಣಜಿ ಟೂರ್ನಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಹೀಗಾಗಿ ಇದೀಗ ವಿರಾಟ್ ಕೊಹ್ಲಿ ಮತ್ತೆ ದೆಹಲಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದರಂತೆ ಜನವರಿ 30 ರಂದು ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ.