ಟೆಸ್ಟ್ ಕ್ರಿಕೆಟ್ನ ಮೊದಲ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್ನ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಬೆಂಡೆತ್ತುವ ಮೂಲಕ ಈ ದಾಖಲೆ ಬರೆದಿರುವುದು ವಿಶೇಷ. ಸಿಡ್ನಿಯ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಪಂದ್ಯದ ದ್ವಿತೀಯ ಇನಿಂಗ್ಸ್ನ ಮೊದಲ ಓವರ್ನಲ್ಲೇ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಯಾವುದೇ ರನ್ ಕಲೆಹಾಕಲಿಲ್ಲ. ಆದರೆ ಬಳಿಕ ಎಸೆದ ಮೂರು ಎಸೆತಗಳಲ್ಲೂ ಫೋರ್ ಬಾರಿಸಿ ಅಬ್ಬರಿಸಿದರು. ಇನ್ನು 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು.
ಈ ಮೂಲಕ ಮಿಚೆಲ್ ಸ್ಟಾರ್ಕ್ ಅವರ ಒಂದೇ ಓವರ್ನಲ್ಲಿ 16 ರನ್ ಬಾರಿಸಿ ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ ನಿರ್ಮಿಸಿದರು. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಪರ ಮೊದಲ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 185 ರನ್ ಬಾರಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು 181 ರನ್ಗಳಿಸಿ ಆಲೌಟ್ ಆಗಿದೆ. ಇದೀಗ 4 ರನ್ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.