ಎಚ್‌ಎಂಪಿವಿ ಹಾಗೂ ಕೋವಿಡ್ 19 ಹೋಲಿಕೆಗಳು ಹಾಗೂ ರೋಗಲಕ್ಷಣದಲ್ಲಿನ ವ್ಯತ್ಯಾಸಗಳೇನು? ಈ ಬಗ್ಗೆ ತಜ್ಞರು ಹೇಳುವುದೇನು?

ಚೀನಾದಲ್ಲಿ ಅಬ್ಬರಿಸುತ್ತಿರುವ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ವೈರಸ್‌ ಇದೀಗ ಭಾರತಕ್ಕೂ ಕಾಲಿಟ್ಟು ಜನರಲ್ಲಿ ಆತಂಕ ಮೂಡಿಸಿದೆ. ಎಚ್‌ಎಂಪಿವಿ ವೈರಸ್ ಅಷ್ಟು ಮಾರಾಣಾಂತಿಕವಲ್ಲ ಎನಿಸಿದರೂ ದುರ್ಬಲ ರೋಗ ನಿರೋಧಕ ಶಕ್ತಿಯಿರುವವರಿಗೆ ಅಪಾಯಕಾರಿಯಾಗಿದೆ. ಹಾಗಾದ್ರೆ ಎಚ್‌ಎಂಪಿವಿ ವೈರಸ್ ಹಾಗೂ ಕೋವಿಡ್ 19 ನಡುವಿನ ಹೋಲಿಕೆಗಳು ಹಾಗೂ ರೋಗಲಕ್ಷಣದಲ್ಲಿನ ವ್ಯತ್ಯಾಸಗಳೇನು? ಈ ಬಗ್ಗೆ ವೈದ್ಯರು ಹೇಳುವುದೇನು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೀನಾದಲ್ಲಿ ಹುಟ್ಟಿಕೊಂಡ ಮತ್ತೊಂದು ಹೊಸ ವೈರಸ್ ಎಚ್ ಎಂಪಿವಿ ಹಾವಳಿ ಜೋರಾಗಿದೆ. ಭಾರತದಲ್ಲೂ ಎಚ್ ಎಂಪಿವಿ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಇದುವರೆಗೂ ಒಟ್ಟು ಭಾರತದಲ್ಲಿ ಏಳು ಎಚ್‌ಎಂಪಿವಿ ಪ್ರಕರಣ ಪತ್ತೆಯಾಗಿದೆ. ಈ ಎಚ್ಎಂಪಿವಿ ರೋಗಲಕ್ಷಣಗಳು ಫ್ಲೂಗೆ ಹೋಲುತ್ತವೆ. ಹಾಗಾಗಿ ಕೆಮ್ಮು, ಜ್ವರ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಹಾಗಾದ್ರೆ ಎಚ್‌ಎಂಪಿವಿ ವೈರಸ್ ಹಾಗೂ ಕೋವಿಡ್ 19 ನಡುವಿನ ವ್ಯತ್ಯಾಸಗಳು ಇಲ್ಲಿದೆ.

ಟೈಮ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಹೊಸ ದೆಹಲಿಯ ಮೋದಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಉಸಿರಾಟ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್‌ ವಿಭಾಗದ ಹಿರಿಯ ಸಲಹೆಗಾರ ಡಾ. ನಿಖಿಲ್, ಈ ಸೋಂಕು ಸಾಮಾನ್ಯವಾಗಿ ಚಳಿಗಾಲ ಮತ್ತು ವಸಂತಕಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಎಚ್ ಎಂಪಿವಿ ಸೋಂಕುಗಳು ಶಿಶುಗಳು, ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚು ಬಾಧಿಸುತ್ತದೆ ಎಂದಿದ್ದಾರೆ.

ಈ ಎರಡೂ ಸೋಂಕುಗಳು ಉಸಿರಾಟದ ಹನಿಗಳು, ಸೋಂಕಿತರಿಂದ ನೇರ ಸಂಪರ್ಕ ಮತ್ತು ಕಲುಷಿತ ವಸ್ತುಗಳಿಂದ ಹರಡುತ್ತದೆ. ಇವೆರಡೂ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಂತಹ ಸೌಮ್ಯ ಮತ್ತು ತೀವ್ರ ಉಸಿರಾಟದ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ. ಆದಾಗ್ಯೂ, ಎಚ್ ಎಂಪಿವಿ ಪ್ರಾಥಮಿಕವಾಗಿ ಸೌಮ್ಯವಾದ ಶೀತ-ತರಹದ ಲಕ್ಷಣಗಳನ್ನು ನೀಡುತ್ತದೆ. ಆದರೆ ಹೆಚ್ಚಿನ ಅಪಾಯದ ಮಟ್ಟ ಹೊಂದಿರುವ ಜನರಲ್ಲೂ ಬ್ರಾಂಕಿಯೋಲೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು, ಇದು ಉಬ್ಬಸ ಮತ್ತು ಉಸಿರಾಟದ ತೊಂದರೆಗಳಿಂದ ಗುರುತಿಸಲ್ಪಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಈ ಕೋವಿಡ್-19 ರೋಗಲಕ್ಷಣಗಳ ವಿಶಾಲ ವ್ಯಾಪ್ತಿ ಹೊಂದಿದ್ದು, ಅಲ್ಲಿ ರುಚಿ ಮತ್ತು ವಾಸನೆಯ ಶಕ್ತಿ ನಷ್ಟವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಬಹು ಅಂಗಾಂಗ ವೈಫಲ್ಯದಂತಹ ಸಮಸ್ಯೆ ಕಂಡು ಬರುತ್ತದೆ. ಕೋವಿಡ್ 19 ವೈರಸನ್ನು ಲಸಿಕೆಗಳು ಮತ್ತು ಆಂಟಿವೈರಲ್ ಔಷಧಿಗಳಿಂದ ತಡೆಯಬಹುದು. ಆದರೆ ಎಚ್ ಎಂಪಿವಿ ವೈರಸ್ ರೋಗಲಕ್ಷಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪರಿಹರಿಸುವ ಮೂಲಕ ಅಪಾಯವನ್ನು ತಡೆಯಬಹುದು. ಪಿಸಿ ಆರ್ ನಂತಹ ಪ್ರಯೋಗಾಲಯ ಪರೀಕ್ಷೆಯು ಈ ಎರಡೂ ಸೋಂಕುಗಳ ರೋಗನಿರ್ಣಯವನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ ತಜ್ಞರು.