ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಮ್

ಉತ್ತರ ಕನ್ನಡ, ಡಿಸೆಂಬರ್ 28: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಕ್ರಿಸ್ಮಸ್ ರಜೆ, ವಾರಾಂತ್ಯ, ಐಟಿ ಬಿಟಿ ಕಂಪನಿಗಳ ವರ್ಷಾಂತ್ಯದ ರಜೆಗಳು ಹೊಸ ವರ್ಷಾಚರಣೆಯ ಕಾರಣ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗೋಕರ್ಣ, ಮುರುಡೇಶ್ವರದ ಪ್ರವಾಸಿ ತಾಣಗಳು ಈಗಾಗಲೇ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿವೆ. ಏತನ್ಮಧ್ಯೆ, ಹೊನ್ನಾವರ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಬೆಳಗ್ಗೆ ಭಾರಿ ಟ್ರಾಫಿಕ್ ​​ಜಾಮ್​ ಉಂಟಾಯಿತು. ವಾಹನಗಳು ಸುಮಾರು 1 ಕಿಲೋಮೀಟರ್​​ವರೆಗೆ ಸಾಲುಗಟ್ಟಿ ನಿಂತಿದ್ದವು. ಸಾಗರ ರಸ್ತೆಯಿಂದ ಹೊನ್ನಾವರ ನಿಲ್ದಾಣದವರೆಗೆ ಟ್ರಾಫಿಕ್​​ ಜಾಮ್​ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.