ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ 19 ವರ್ಷದ ಆಸೀಸ್ ಬ್ಯಾಟರ್ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಒಂದೇ ಓವರ್‌ನಲ್ಲಿ 18 ರನ್ ಸಿಡಿಸುವ ಮೂಲಕ ರೋಹಿತ್ ಪಡೆಯನ್ನ ತಬ್ಬಿಬ್ಬುಗೊಳಿಸಿದ್ದಾರೆ. ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯವನ್ನಾಡುತ್ತಿರುವ ಸ್ಯಾಮ್ ಕಾನ್ಸ್ಟಸ್ ಎಂಬ 19ರ ಹರೆಯದ ಯುವಕ ಅರ್ಧಶತಕ ಹೊಡೆದು ಮಿಂಚಿದ್ದಾರೆ.
ಕಳೆದ 3 ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳ ಎಸೆತಗಳನ್ನು ಅಂದಾಜಿಸಿ ಆಡಲು ವಿಫಲರಾಗಿದ್ದ ಆರಂಭಿಕ ಆಟಗಾರ ಮೆಕ್ ಸ್ವೀನಿ ಅವರನ್ನ 4ನೇ ಪಂದ್ಯದಿಂದ ಹೊರದಬ್ಬಿ ಸ್ಯಾಮ್ ಕಾನ್ಸ್ಟಸ್ಗೆ ಅವಕಾಶ ನೀಡಲಾಯಿತು. ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ʻಪ್ರಧಾನಮಂತ್ರಿಗಳ ಇಲೆವೆನ್ʼ ಪರವಾಗಿ ಭಾರತದ ವಿರುದ್ಧ ಆಡಿದ್ದ ಈತ ಆಗಲೇ ಸದ್ದು ಮಾಡಿದ್ದ. ಇದೀಗ ಪದಾರ್ಪಣೆ ಪಂದ್ಯದಲ್ಲಿ 52 ಎಸೆತಗಳಲ್ಲೇ ಅರ್ಧಶತಕವನ್ನೂ ಪೂರೈಸಿದ್ದಾರೆ.
ಬುಮ್ರಾಗೆ ಸಿಕ್ಸರ್ ರುಚಿ ತೋರಿಸಿದ ಯುವಕ:
19ರ ಯುವಕ ಬುಮ್ರಾ ಅವರ ಒಂದೇ ಓವರ್‌ನಲ್ಲಿ 18 ರನ್ ಸಿಡಿಸುವ ಜೊತೆಗೆ ಭರ್ಜರಿ ಸಿಕ್ಸರ್ ಸಿಡಿಸಿ ವಿಶಿಷ್ಟ ದಾಖಲೆಯೊಂದಕ್ಕೂ ಸಂಚಕಾರ ತಂದರು. ಹೌದು. ಬುಮ್ರಾ ಅವರಿಗೆ ಕಳೆದ 3 ವರ್ಷಗಳ ಹಿಂದೆ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಸಿಕ್ಸರ್ ಹೊಡೆದಿದ್ದರು. ಅದಾದ ಬಳಿಕ ವೇಗಿ 4,484 ಎಸೆತಗಳನ್ನು ಎಸೆಸಿದ್ದರೂ ಯಾರೊಬ್ಬರೂ ಸಿಕ್ಸರ್ ಸಿಡಿಸುವ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನಲ್ಲಿ 19ರ ಯುವಕ ಸಿಕ್ಸರ್ ಸಿಡಿಸುವ ಮೂಲಕ ಬುಮ್ರಾ ಅವರ ದಾಖಲೆಯೊಂದನ್ನ ನುಚ್ಚುನೂರು ಮಾಡಿದ್ದಾರೆ.
ಇನ್ನೂ ಪದಾರ್ಪಣೆ ಪಂದ್ಯದಲ್ಲಿ 65 ಎಸೆತಗಳನ್ನು ಎದುರಿಸಿದ ಸ್ಯಾಮ್ ಕಾನ್‌ಸ್ಟಾಸ್ 60 ರನ್ ಚಚ್ಚಿದರು. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸೀಶ್ ಮೊದಲ ದಿನವೇ 311 ರನ್ ಗಳಿಸಿದೆ.